ಕವಿಗೆ ಪ್ರತಿಭೆಯೇ ಮಾನದಂಡ: ಕುಮಾರಸ್ವಾಮಿ
ಕ.ಪ್ರ.ವಾರ್ತೆ ಎಚ್.ಡಿ.ಕೋಟೆ ಅ. 29
ನಮಗೆ ಗೋಚರಿಸುವ ವಸ್ತುಗಳ ಒಳಗಿರುವ ಅರ್ಥವನ್ನು ಕಾಣುವ ಮತ್ತು ಅದನ್ನು ಕಾವ್ಯ ರೂಪಕ್ಕಿಳಿಸುವ ಸಾಮರ್ಥ್ಯ ಕವಿಗೆ ಇರಬೇಕು. ಯಾಕೆಂದರೆ ಕವಿಗೆ ಪ್ರತಿಭೆಯೇ ಮಾನದಂಡ ಎಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷ ಸಿ.ಎಸ್. ಕುಮಾರಸ್ವಾಮಿ ಅಭಿಪ್ರಾಯಪಟ್ಟರು.
ತಾಲೂಕಿನ ಮಾದಾಪುರ ಗ್ರಾಮದಲ್ಲಿರುವ ಚಂದ್ರಮೌಳೇಶ್ವರ ಮಠದಲ್ಲಿ ಸೋಮವಾರ ಕಂಪಲಾಪುರ ಮೋಹನ್ ಸಾರಥ್ಯದಲ್ಲಿ ನಡೆದ 164ನೇ ಮನೆ ಮನೆ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಆ ರೀತಿಯ ಪ್ರತಿಭೆ ಹೊರಹೊಮ್ಮಲು ಇಂತಹ ಮನೆ ಮನೆ ಕವಿಗೋಷ್ಠಿಗಳು ಸ್ಪೂರ್ತಿಯ ಚಿಲುಮೆಗಳಾಗಿವೆ ಎಂದರು.
ಕುವೆಂಪುರವರು ಶ್ರೀ ರಾಮಾಯಣ ದರ್ಶನಂ ಕೃತಿ ಬರೆಯುವಾಗ 4 ತಿಂಗಳು ಬರವಣಿಗೆ ಸಾಗಲಿಲ್ಲ. ಆಗ ಅವರು ಮುಂದುವರಿಸಲು ಕಾದು ಕಾದು ಬೇಸತ್ತು ಚಿಂತಾಮಗ್ನರಾಗಿದ್ದಾಗ ಅವರ ಮಗ ಪೂರ್ಣಚಂದ್ರ ತೇಜಸ್ವಿ ಅಳತೊಡಗಿದ ಆಗ 'ಏಕೋ ಅಳುತ್ತೀಯಾ' ಎಂದು ಕುವೆಂಪು ಕೊಠಡಿಗೆ ಹೋದರು. ಏಕಳುವೆ ತೇಜಸ್ವಿ ಎಂಬ ಮಾತು ಅತ್ತಲಾ ಕಿಷ್ಟಿಂದೆಯೊಳ್ ಎಂಬ ಸಂಚಿಕೆ ಆರಂಭಗೊಳ್ಳಲು ಸ್ಫೂರ್ತಿಯಾಯಿತು. ಆದ್ದರಿಂದ ಪ್ರತಿಯೊಬ್ಬರು ತಮ್ಮ ಜೀವನಾನುಭವವನ್ನೆ ಸ್ಫೂರ್ತಿಯನ್ನಾಗಿ ತೆಗೆದುಕೊಂಡು ಕವಿಗಳಾಗುವಂತೆ ಅವರು ತಿಳಿಸಿದರು. ಮನೆ ಮನೆ ಕವಿಗೋಷ್ಠಿ ಅಧ್ಯಕ್ಷ ಕಂಪ್ಲಾಪುರ ಮೋಹನ್ಕುಮಾರ್, ಚಂದ್ರಮೌಳೇಶ್ವರ ಸ್ವಾಮೀಜಿ, ದೊಡ್ಡಸ್ವಾಮಿ, ತ್ರೀವೇಣಿ, ರೂಪ, ಸರ್ವಮಂಗಳ ನಾಗೇಂದ್ರ ಇದ್ದರು.