ಕುಸಿಯುತ್ತಿದೆ ಮೂಲ ವಿಜ್ಞಾನ: ಡಾ. ಚಂದ್ರಶೇಖರ್
ಕ.ಪ್ರ.ವಾರ್ತೆ ಮೈಸೂರು ಅ. 29
ಈಗಿನ ವಿದ್ಯಾರ್ಥಿಗಳಿಗೆ ವೈದ್ಯಕೀಯ ಮತ್ತು ಎಂಜಿನಿಯರಿಂಗ್ ವಿದ್ಯಾಭ್ಯಾಸ ಹೊರತುಪಡಿಸಿದರೇ ಬೇರೆ ಯಾವ ಆಯ್ಕೆಗಳು ಕಾಣುತ್ತಿಲ್ಲ. ಮೂಲ ವಿಜ್ಞಾನವು ದಿನದಿಂದ ದಿನಕ್ಕೆ ಕುಸಿಯುತ್ತಿದೆ ಎಂದು ಆರ್ಎಂಪಿ ವಿಜ್ಞಾನಿ ಪ್ರೊ. ಚಂದ್ರಶೇಖರ್ ಹೇಳಿದರು.
ಜಿಐಎಂಡಿಎಸ್ ಪಿಯು ಕಾಲೇಜಿನ ವಿಜ್ಞಾನ ಕ್ಲಬ್ ಆಯೋಜಿಸಿದ್ದ ವಿಜ್ಞಾನ ವಿಚಾರದಲ್ಲಿ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಎಷ್ಟೋ ಕಾಲೇಜುಗಳಲ್ಲಿ ಮೂಲ ವಿಜ್ಞಾನದ ವಿಭಾಗ ಮುಚ್ಚಿ ಹೋಗುತ್ತಿದೆ. ಪ್ರಸ್ತುತ ಮೂಲ ವಿಜ್ಞಾನ ವಿದ್ಯಾರ್ಥಿಗಳಿಗೆ ಹತ್ತಾರು ಅವಕಾಶಗಳಿವೆ. ಸರ್ಕಾರವು ಸೌಲಭ್ಯ ಒದಗಿಸಿದರೂ ಸಹ ವಿದ್ಯಾರ್ಥಿಗಳು ಕಲಿಕೆಗೆ ಬಾರದ ಕಾರಣ ವಿಜ್ಞಾನ ಶಿಕ್ಷಣವು ಸೊರಗುತ್ತಿದೆ ಎಂದು ವಿಷಾದಿಸಿದರು. ಮೈಸೂರಿನಲ್ಲಿ ಸಿಎಫ್ಟಿಆರ್ಐ ಮತ್ತು ಆರ್ಎಂಪಿ ಅಂತಹ ಪ್ರತಿಷ್ಠಿತ ಸಂಸ್ಥೆಗಳಿದ್ದರೂ ಅದರ ಉಪಯೋಗ ಹಲವರಿಗೆ ತಿಳಿದಿಲ್ಲ. ಮೈಸೂರು ವಿವಿ ವಿಜ್ಞಾನ ವಿಭಾಗದವರು ಮಕ್ಕಳಲ್ಲಿ ವಿಜ್ಞಾನದ ಅರಿವು ಮೂಡಿಸಬೇಕು. ಈಗಿನ ಶಿಕ್ಷಣವು ಹಣದ ಕಡೆಯಷ್ಟೇ ಮುಖ ಮಾಡುತ್ತಿದೆ. ಹಣದೊಂದಿಗೆ ಆತ್ಮ ಸಂತೋಷ ವೃದ್ಧಿಸಿ, ಮನೋವಿಕಾಸ ಒದಗಿಸುವ ಶಿಕ್ಷಣದತ್ತ ಎಲ್ಲರೂ ಮುಖ ಮಾಡಬೇಕಿದೆ ಎಂದು ಅವರು ಸಲಹೆ ನೀಡಿದರು.