ನಕಲಿ ಜಾತಿ ಪ್ರಮಾಣ ಪತ್ರ: ಅನ್ಯಾಯ
ಕ.ಪ್ರ.ವಾರ್ತೆ ಪಿರಿಯಾಪಟ್ಟಣ ಅ. 29
ಸೋಲಿಗ ಜನಾಂಗಕ್ಕೆ ಸಿಗುವ ಸವಲತ್ತುಗಳನ್ನು ಅನ್ಯ ಸಮುದಾಯದವರು ನಕಲಿ ಜಾತಿ ಪ್ರಮಾಣ ಪತ್ರ ಸೃಷ್ಟಿಸಿಕೊಂಡು ಸೋಲಿಗರಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಸೋಲಿಗ ಸಮುದಾಯದ ಬುಡಕಟ್ಟು ಕೃಷಿಕರ ಸಂಘದ ತಾಲೂಕು ಅಧ್ಯಕ್ಷ ವೆಂಕಟಸ್ವಾಮಿ ಆರೋಪಿಸಿದ್ದಾರೆ.
ಸೋಲಿಗೆ ಜನಾಂಗಕ್ಕೆ ಸಿಗುವ ಸೌಲಭ್ಯವನ್ನು ಪಡೆಯಲು ಸೋಲಿಗ ಸಮುದಾಯಕ್ಕೆ ಅನ್ಯಾಯ ಮಾಡುತ್ತಿದ್ದಾರೆ. ಈ ಹಿಂದೆ ತಾಲೂಕಿನ ಐಲಾಪುರ ಗ್ರಾಮದಲ್ಲಿ ವಾಸವಿದ್ದ ಕೆಲವು ತೆಲಗು ಗೊಲ್ಲ ಜನಾಂಗದವರು ಪ್ರಸ್ತುತ ಗಾಂಧಿ ನಗರದಲ್ಲಿ ವಾಸವಿದ್ದು, ಸರ್ಕಾರದ ಸವಲತ್ತು ಪಡೆಯಲು ನಕಲಿ ದಾಖಲೆಗಳನ್ನು ನೀಡಿ ಸೋಲಿಗರು ಎಂಬ ಜಾತಿ ಪ್ರಮಾಣ ಪತ್ರ ಪಡೆದು ಸರ್ಕಾರದ ಸವಲತ್ತು ಪಡೆಯುತ್ತಿದ್ದಾರೆ ಎಂದು ದೂರಿದರು. ಈ ಬಗ್ಗೆ ಸಮಾಜ ಕಲ್ಯಾಣ ಇಲಾಖೆಯ ಮಂತ್ರಿಗಳಿಗೆ, ಪರಿಶಿಷ್ಟ ಜಾತಿ ಮತ್ತು ವರ್ಗಗಳ ಕಲ್ಯಾಣ ಇಲಾಖೆ, ಮಾನವ ಹಕ್ಕು ಆಯೋಗ, ಜಿಲ್ಲಾಧಿಕಾರಿಗಳಿಗೆ, ಗಿರಿಜನ ಸಮನ್ವಯ ಯೋಜನಾಧಿಕಾರಿಗಳಿಗೆ, ತಹಸೀಲ್ದಾರರಿಗೆ ಮನವಿ ಸಲ್ಲಿಸಿದ್ದು, ಕೂಡಲೆ ಸೋಲಿಗ ಸಮುದಾಯಕ್ಕೆ ನ್ಯಾಯ ಒದಗಿಸಿಕೊಡುವಂತೆ ಮನವಿ ಮಾಡಿದ್ದಾರೆ.