ಯುವಜನಾಂಗ ಸಂಸ್ಕೃತಿಗೆ ಮುಂದಾಗಲಿ: ಮಹೇಶ್
ಕ.ಪ್ರ.ವಾರ್ತೆ ರಾವಂದೂರು ಅ. 29
ನಮ್ಮ ದೇಶದ ಮತ್ತು ಸಂಸ್ಕೃತಿ ಬೆಳೆಸಲು ಯುವಜನಾಂಗ ಮುಂದಾಗಬೇಕು ಎಂದು ಮಾನಸ ಸಾಂಸ್ಕೃತಿಕ ಸಂಸ್ಥೆ ಕಾರ್ಯದರ್ಶಿ ಆರ್.ಎಸ್. ಮಹೇಶ್ ಕರೆ ನೀಡಿದರು.
ಪಿರಿಯಾಪಟ್ಟಣ ತಾಲೂಕು ರಾವಂದೂರು ಪದವಿಪೂರ್ವ ಕಾಲೇಜು ವತಿಯಿಂದ ಹಂಡಿತವಳ್ಳಿ ಗ್ರಾಮದಲ್ಲಿ ಹಮ್ಮಿಕೊಂಡಿರುವ ಎನ್ಎಸ್ಎಸ್ ಶಿಬಿರದ ಮುಕ್ತಾಯ ಸಮಾರಂಭದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳ ಆಸಕ್ತಿಗೆ ಅನುಗುಣವಾಗಿ ಅವರ ಪರಿಪೂರ್ಣ ಬೆಳವಣಿಗೆಗೆ ಪೋಷಕರು ಸಹಕಾರಿಯಾಗಬೇಕು. ಕೇವಲ ಹಣ ಮಾಡುವುದಷ್ಟೆ ಅಲ್ಲ. ಅದರೊಂದಿಗೆ ಸಮಾಜದ ಅಭಿವೃದ್ಧಿ, ಸೇವಾ ಮನೋಭಾವನೆಯನ್ನುಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.
ಇದೇ ವೇಳೆ ಅತ್ಯುತ್ತಮ ಸ್ವಯಂ ಸೇವಕರಾದ ರವಿ, ರವೀಶ್, ಅರುಣ್, ಸುನೀಲ್, ಪುಣ್ಯವತಿ, ಪ್ರಮೋದ್ ಅವರಿಗೆ ಬಹುಮಾನ ವಿತರಿಸಲಾಯಿತು.
ಉಪನ್ಯಾಸಕ ಡಾ. ಚಂದ್ರು, ನಿವೃತ್ತ ಶಿಕ್ಷಕ ನಂಜುಂಡಪ್ಪ, ಪುಟ್ಟಪ್ಪ, ಪ್ರಾಂಶುಪಾಲ ಕೆ.ಪಿ. ಜಗನ್ನಾಥರಾವ್ ಜೋಷಿ, ಗ್ರಾಮಸ್ಥರಾದ ದೊಡ್ಡಣ್ಣಶೆಟ್ಟಿ, ಎಚ್.ಕೆ. ಕುಮಾರ್, ಗೋವಿಂದರಾಜ್, ಪ್ರಭಾಕರ್, ಶಿಬಿರಾಧಿಕಾರಿ ಕೆ.ಜೆ. ರಾಜೀವ್ ಇದ್ದರು.