ಸುದರ್ಶನ ವಿಜಯ ಯಕ್ಷಗಾನ
ಮೈಸೂರು: ಉಡುಪಿಯ ಪೆರ್ಡೂರು ಅನಂತ ಪದ್ಮನಾಭ ಯಕ್ಷಗಾನ ಮಂಡಳಿಯು ಜಗನ್ಮೋಹನ ಅರಮನೆಯಲ್ಲಿ ಸೋಮವಾರ ಸುದರ್ಶನ ವಿಜಯ ಮತ್ತು ಸುಧನ್ವ ಕಾಳಗ ಎಂಬ ಯಕ್ಷಗಾನ ಪ್ರದರ್ಶನ ನಡೆಸಿತು.
ಬಂಟರ ಸಂಘ ಹಾಗೂ ಬಂಟರ ಸಂಘ ಮೈಸೂರು ಚಾರಿಟಬಲ್ ಟ್ರಸ್ಟ್ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಈ ಪ್ರದರ್ಶನ ಯಕ್ಷಗಾನ ಪ್ರೇಮಿಗಳ ಮನಸೂರೆಗೊಂಡಿತು.
ಹಾಸ್ಯ ಪಾತ್ರದಲ್ಲಿ ಕ್ಯಾದಗಿ ಮಹಾಬಲೇಶ್ವರ ಭಟ್ ಹಾಗೂ ಸ್ತ್ರೀವೇಷಧಾರಿಯಾಗಿ ಸುಬ್ರಹ್ಮಣ್ಯ ಹೆಗಡೆ ಯಲಗುಪ್ಪ ಹಾಗೂ ವಿಜಯ ಬಡಾಮಕ್ಕಿ ಅವರು ಗಮನ ಸೆಳೆದರು. ವಿವಿಧ ಪಾತ್ರಗಳಲ್ಲಿ ಶ್ರೀಪಾದ ಭಟ್ ಥಂಡಿಮನೆ, ಈಶ್ವರ ನಾಯಕ್, ಮಹಾಬಲೇಶ್ವರ ಗೌಡ, ತೀರ್ಥಹಳ್ಳಿ ಗೋಪಾಲ ಆಚಾರ್ಯ, ಉದಯ ಕಡಬಾಳ, ಪ್ರಕಾಶ್ ಮೊಗವೀರ ಹಾಗೂ ರವೀಂದ್ರ ದೇವಾಡಿಗ ಅಭಿನಯಿಸಿದರು. ಹಿಮ್ಮೇಳದಲ್ಲಿ ರಾಘವೇಂದ್ರ ಆಚಾರ್ಯ ಭಾಗವತವನ್ನೂ, ಸುನೀಲ್ ಭಂಡಾರಿ ಕಟತೋಕ ಮದ್ದಳೆಯನ್ನೂ ಹಾಗೂ ಹಳ್ಳಾಡಿಯ ಜನಾರ್ದನ ಆಚಾರ್ಯ ಚಂಡೆ ನುಡಿಸಿದರು.