ಅಖಂಡ ಭಾರತಕ್ಕಾಗಿ ಮೋದಿ ಪ್ರಧಾನಿಯಾಗಲಿ'
ಟಿ. ನರಸೀಪುರ: ದೇಶದ ಭದ್ರತೆಯನ್ನು ಬಿಗಿಗೊಳಿಸಿ, ಏಕತೆಯನ್ನು ಬಿಂಬಿಸುವ ಅಖಂಡ ಭಾರತಕ್ಕಾಗಿ ನರೇಂದ್ರ ಮೋದಿ ಅವರು ಪ್ರಧಾನಿಯಾಗಬೇಕು ಎಂದು ವಿಧಾನ ಪರಿಷತ್ ಸದಸ್ಯ ಸಿ.ಎಚ್. ವಿಜಯಶಂಕರ್ ಆಶಯ ವ್ಯಕ್ತಪಡಿಸಿದರು.
ಪಟ್ಟಣದ ಬಾಬು ಜಗಜೀವನ್ರಾಂ ಭವನದಲ್ಲಿ ನಡೆದ ವರುಣ ಬಿಜೆಪಿ ಬೂತ್ ಮಟ್ಟದ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ಗುಜರಾತ್ ರಾಜ್ಯದ ಜಾಗತಿಕ ಸಾಲಕ್ಕೆ ಮುಕ್ತಿ ನೀಡಿದ ಮೋದಿ ಅವರು ಅನ್ಯ ರಾಷ್ಟ್ರದ ಜಾಗತಿಕ ಬ್ಯಾಂಕ್ನಲ್ಲಿ ಲಕ್ಷ ಕೋಟಿ ರು.ಗಳ ಠೇವಣಿ ಇಟ್ಟು ರಾಜ್ಯವನ್ನು ಅಭಿವೃದ್ಧಿಪಡಿಸಿರುವುದರಿಂದ ಅವರೇ ದೇಶದ ಮುಂದಿನ ಪ್ರಧಾನಿಯಾಗಬೇಕು ಎಂದರು.
ರಾಷ್ಟ್ರದಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಸಾಮಾನ್ಯ ಜನರ ಜೀವನ ಸಂಕಷ್ಟಕ್ಕೆ ಸಿಲುಕಿಕೊಂಡಿದೆ. ಚೀನಾದ ಸೈನಿಕರು ಹಾಗೂ ಪಾಕಿಸ್ತಾನದ ಭಯೋತ್ಪಾದಕರಿಂದ ಅಕ್ರಮ ದಾಳಿಯಿಂದ ನಮ್ಮ ಸೈನಿಕರು ಬಲಿಯಾಗಿ, ಭದ್ರತೆಗೆ ಸವಾಲಾಗಿರುವ ಸಂದರ್ಭದಲ್ಲಿಯೇ ಲೋಕಸಭೆ ಚುನಾವಣೆ ಎದುರಾಗುತ್ತಿದೆ. ಇಂತಹ ಸಂದರ್ಭದಲ್ಲಿ ದೇಶದ ಪ್ರಜ್ಞಾವಂತ ಪ್ರಜೆಗಳು ಚಿಂತನೆ ಮಾಡಬೇಕು. ದೇಶದ ಏಕತೆಯನ್ನು ಬಯಸುವ ಮೋದಿ ಅವರ ನೇತೃತ್ವದ ಬಿಜೆಪಿ ಕೇಂದ್ರದಲ್ಲಿ ಅಧಿಕಾರವನ್ನು ನೀಡಬೇಕು ಎಂದು ಮನವಿ ಮಾಡಿದರು.
ವಿಧಾನ ಪರಿಷತ್ ಮಾಜಿ ಸದಸ್ಯ ಸಿದ್ದರಾಜು ಮಾತನಾಡಿ, ಬೆಂಗಳೂರಿನಲ್ಲಿ ನ.17ರಂದು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರ ಬೃಹತ್ ಸಮಾವೇಶ ನಡೆಯುವ ಹಿನ್ನೆಲೆಯಲ್ಲಿ ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲೂ ಬಿಜೆಪಿ ಬೂತ್ ಮಟ್ಟದ ಸಮಾವೇಶವನ್ನು ನಡೆಸಲಾಗಿದೆ. ಮೋದಿ ಸಮಾವೇಶಕ್ಕೆ 10 ರು.ಗಳ ಟಿಕೆಟ್ ನೀಡಲಾಗುವುದು. ಬರುವವರಿಗೆ ಸಾರಿಗೆ ಸೌಲಭ್ಯವನ್ನು ಕಲ್ಪಿಸಿಕೊಡಲಾಗುವುದು ಎಂದು ತಿಳಿಸಿದರು.
ವಸ್ತುಪ್ರದರ್ಶನ ಮಾಜಿ ಅಧ್ಯಕ್ಷ ಎಸ್.ಡಿ. ಮಹೇಂದ್ರ, ಮೃಗಾಲಯ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಂ. ನಂಜುಂಡಸ್ವಾಮಿ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ತೋಟದಪ್ಪ ಬಸವರಾಜು, ಕರೋಹಟ್ಟಿ ಮಹದೇವಯ್ಯ, ಮುಖಂಡರಾದ ಹೆಳವರಹುಂಡಿ ಪಿ. ನಟರಾಜು, ದೇವನೂರು ಪ್ರತಾಪ್, ವರಕೋಡು ಪ್ರಕಾಶ್, ತೊರವಳ್ಳಿ ಶಿವನಂಜಪ್ಪ, ಕೆ.ಎಸ್. ಬಸವರಾಜು, ಕುಪ್ಪೇಗಾಲ ಶಿವಬಸಪ್ಪ, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಗುರುಮಲ್ಲಮ್ಮ ಇದ್ದರು.