ಎರಡು ಕಡೆ ಸರ ಅಪಹರಣ
ಮೈಸೂರು: ನಗರದ ಎರಡು ಕಡೆ ಬುಧವಾರ ಸರ ಅಪಹರಣ ನಡೆದಿದೆ.ಜಯನಗರ 4ನೇ ಮುಖ್ಯರಸ್ತೆ, 8ನೇ ಕ್ರಾಸ್ ನಿವಾಸಿ ಜಯಲಕ್ಷ್ಮಮ್ಮ ಎಂಬವರು ಮನೆಯ ಕಾಂಪೌಂಡ್ ಆವರಣದಲ್ಲಿ ಹೂ ಕೀಳುತ್ತಿದ್ದರು. ಈ ಬೈಕಿನಲ್ಲಿ ಬಂದ ಇಬ್ಬರು ವ್ಯಕ್ತಿಗಳ ಪೈಕಿ ಒಬ್ಬಾತ ಫೋಟೋಮೊಂದನ್ನು ತೋರಿಸಿ ವಿಳಾಸ ಕೇಳುವ ನೆಪದಲ್ಲಿ ಬಂದು 3 ಲಕ್ಷ ರು. ಮೌಲ್ಯದ 100 ಗ್ರಾಂ. ತೂಕದ ಚಿನ್ನದ ಸರ ಎಗರಿಸಿಕೊಂಡು ಹೋಗಿದ್ದಾನೆ. ಈ ಸಂಬಂಧ ಅಶೋಕಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜೆಎಲ್ಬಿ ರಸ್ತೆಯ ವಾಸನ್ ಐ ಕೇರ್ ಬಳಿ ಹೋಗುತ್ತಿದ್ದ ಸಾವಿತ್ರಮ್ಮ ಎಂಬವರ ಚಿನ್ನದ ಮಾಂಗಲ್ಯ ಸರವನ್ನು ಬೈಕಿನಲ್ಲಿ ಬಂದ ವ್ಯಕ್ತಿಗಳು ಅಪಹರಿಸಲು ನಡೆಸಿದ ಪ್ರಯತ್ನ ವಿಫಲವಾಗಿದೆ. ಸರ ಕೀಳಲು ಪ್ರಯತ್ನಿಸಿದಾಗ ಸಾವಿತ್ರಮ್ಮ ಅವರು ಸರವನ್ನು ಬಿಗಿಯಾಗಿ ಹಿಡಿದುಕೊಂಡಿದ್ದಾರೆ. ಬಲವಾಗಿ ಎಳೆದಿದ್ದರಿಂದ 5 ಗ್ರಾಂ. ತುಂಡು ಸರ ಮಾತ್ರ ಕಳ್ಳರ ಪಾಲಾಗಿದೆ. ಈ ಸರ ಅಪಹರಣ ಪ್ರಯತ್ನವು ಲಕ್ಷ್ಮಿಪುರಂ ಠಾಣೆ, ಕೃಷ್ಣರಾಜ ಸಂಚಾರ ಠಾಣೆ, ಕೆ.ಆರ್. ಉಪ ವಿಭಾಗ ಎಸಿಪಿ ಕಚೇರಿ ಸಮೀಪದಲ್ಲಿ ನಡೆದಿದೆ. ಲಕ್ಷ್ಮಿಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಬ್ಬರು ಬಾಲಕರು ನಾಪತ್ತೆ
ಮೈಸೂರು: ಪ್ರತ್ಯೇಕ ಪ್ರಕರಣಗಳಲ್ಲಿ ವಿದ್ಯಾರಣ್ಯಪುರಂ ಠಾಣೆ ವ್ಯಾಪ್ತಿಯಲ್ಲಿ ಇಬ್ಬರು ಬಾಲಕರು ನಾಪತ್ತೆಯಾಗಿದ್ದಾರೆ. ಮಾನಂದವಾಡಿ ರಸ್ತೆಯಲ್ಲಿರುವ ರೇಲ್ವೆ ಕ್ವಾಟ್ರಸ್ ನಿವಾಸಿ ಎಂ. ಮುನಿರಾಜು ಎಂಬವರ ಪುತ್ರ ಹಾಗೂ ಸೇಂಟ್ ಥಾಮಸ್ ಶಾಲೆಯ 7ನೇ ತರಗತಿ ವಿದ್ಯಾರ್ಥಿ ಎಂ. ನಿರಂಜನ್(13) ಶನಿವಾರ ಬೆಳಗ್ಗೆ ಫುಟ್ಬಾಲ್ ಆಡಲು ಹೋದವ ನಾಪತ್ತೆಯಾಗಿದ್ದಾನೆ. ಮಹರ್ಷಿ ಶಾಲೆ 9ನೇ ತರಗತಿ ವಿದ್ಯಾರ್ಥಿ ಹಾಗೂ ಎಂ.ಬಿ. ಲೋಕೇಶ್ ಎಂಬವರ ಪುತ್ರ ಎಲ್.ಪಿ. ಶಶಿಧರ್(14) ಶನಿವಾರ ಶಾಲೆಗೆ ಹೋದವ ನಾಪತ್ತೆಯಾಗಿದ್ದಾನೆ. ಚಹರೆ- 5.2 ಅಡಿ ಎತ್ತರ, ಎಣ್ಣೆಗೆಂಪು ಮೈಬಣ್ಣ, ಸಾಧಾರಣ ಮೈಕಟ್ಟು, ಕೋಲು ಮುಖ, ಕನ್ನಡ ಮತ್ತು ಇಂಗ್ಲಿಷ್ ಮಾತನಾಡುತ್ತಾನೆ. ಈ ಇಬ್ಬರು ಬಾಲಕರ ಬಗ್ಗೆ ಮಾಹಿತಿ ಸಿಕ್ಕಲ್ಲಿ ದೂ. 0821- 2418322, 522 ಸಂಪರ್ಕಿಸಲು ಪೊಲೀಸರು ಕೋರಿದ್ದಾರೆ.
ಮಗುವಿನ ಪಾಲಕರ ಪತ್ತೆಗೆ ಮನವಿ
ಮೈಸೂರು: ವಿಜಯನಗರ ಠಾಣೆ ಪೊಲೀಸರು ಸೋಮವಾರ ಗಸ್ತಿನಲ್ಲಿದ್ದಾಗ ವಿದ್ಯಾವರ್ಧಕ ಎಂಜಿನಿಯರಿಂಗ್ ಕಾಲೇಜು ಬಳಿ 3 ವರ್ಷದ ದರ್ಶನ್ ಅ. ಹುಲಿಯ ಒಬ್ಬಂಟಿಯನಾಗಿ ಪತ್ತೆಯಾಗಿದ್ದಾನೆ. ಈತ ತನ್ನ ಹೆಸರು ದರ್ಶನ್, ಹುಲಿಯ, ಊರು ಪಾಂಡವಪುರ ಎಂದು ತಿಳಿಸಿದ್ದು, ಇತರೆ ಮಾಹಿತಿ ಲಭ್ಯವಾಗಿಲ್ಲ. ಹೀಗಾಗಿ ಪೊಲೀಸರು ಮಗುವನ್ನು ಬಾಪೂಜಿ ಮಕ್ಕಳ ಮನೆಗೆ ಇರಿಸಿದ್ದಾರೆ. ಮಗುವಿನ ಚಹರೆ- 3.2 ಅಡಿ ಎತ್ತರ, 13 ಕೆ.ಜಿ. ತೂಕ, ಎರಡು ಕಿವಿ ಚುಚ್ಚಿ ಕಡ್ಡಿ ಹಾಕಲಾಗಿದೆ. ಕಂದು ಬಣ್ಣದ ಟೀ- ಶರ್ಟ್, ಕಪ್ಪು ಚಡ್ಡಿ, ಬೂದು ಬಣ್ಣದ ಜೀನ್ಸ್ ಜಾಕೆಟ್ ಧರಿಸಿದ್ದಾನೆ. ಕನ್ನಡ ಮಾತನಾಡುತ್ತಾನೆ. ಈ ಮಗುವಿನ ಪಾಲಕರು ಪತ್ತೆಯಾದಲ್ಲಿ ದೂ.0821- 2510738, ಮೊ. 99453 73076 ಸಂಪರ್ಕಿಸಲು ಬಾಪೂಜಿ ಮಕ್ಕಳ ಮನೆ ವ್ಯವಸ್ಥಾಪಕರಾದ ನಂದಾ ಪ್ರಸಾದ್ ಕೋರಿದ್ದಾರೆ.