ಹಣ ವಾಪಸ್ ಕೊಡಿಸಿ: ಶುಶ್ರೂಷಕರ ಪ್ರತಿಭಟನೆ
ಕ.ಪ್ರ.ವಾರ್ತೆ ಮೈಸೂರು ಅ. 30
ಕೆಲಸ ಕಾಯಂ ಮಾಡಿಸುವುದಾಗಿ ನಂಬಿಸಿ ಹಣ ಪಡೆದು ಮೋಸ ಮಾಡಿರುವ ವ್ಯಕ್ತಿಗಳಿಂದ ಹಣ ವಾಪಸ್ ಕೊಡಿಸುವಂತೆ ಆಗ್ರಹಿಸಿ ಬೆಂಗಳೂರು ಬಿಎಂಸಿ ಮತ್ತು ಆರ್ಐ ಗುತ್ತಿಗೆ ಆಧಾರದ ಶುಶ್ರೂಷಕರು ಮೈಸೂರು ಜಿಲ್ಲಾಧಿಕಾರಿ ಕಚೇರಿ ಎದುರು ಬುಧವಾರ ಪ್ರತಿಭಟಿಸಿದರು.
ಬಿಎಂಸಿ ಮತ್ತು ಆರ್ಐನಿಂದ 409 ಗುತ್ತಿಗೆ ಆಧಾರದ ಶುಶ್ರೂಷಕರನ್ನು ಸೇವೆಯಿಂದ ಬಿಡುಗಡೆಗೊಳಿಸಿತ್ತು. ಸೇವೆ ಕಾಯಂಗಾಗಿ ಪ್ರತಿಭಟಿಸಿದ್ದ ನಮ್ಮನ್ನು ಭೇಟಿಯಾದ ಕೆಲವು ವ್ಯಕ್ತಿಗಳು ಸೇವೆ ಕಾಯಂ ಮಾಡಿಸುವುದಾಗಿ ನಂಬಿಸಿ, ಹಣ ಪಡೆದು ವಂಚಿಸಿದ್ದಾರೆ. ಹಣ ಪಡೆದವರನ್ನು ಕೇಳಿದರೆ ಮೈಸೂರು ನಗರ ಪಾಲಿಕೆ ಸದಸ್ಯ ನಂದೀಶ್ ಪ್ರೀತಂ ಅವರಿಗೆ ನೀಡಿರುವುದಾಗಿ ಹೇಳುತ್ತಿದ್ದಾರೆ. ನಂದೀಶ್ ಪ್ರೀತಂ ಅವರನ್ನು ಕೇಳಿದರೇ ಹಣ ಕೊಟ್ಟವರ ಬಳಿಯೇ ಪಡೆದುಕೊಳ್ಳುವಂತೆ ಹೇಳುತ್ತಿದ್ದಾರೆ ಎಂದು ಅವರು ಆರೋಪಿಸಿದರು.
ಇದರಿಂದ ನಮಗೆ ಕೆಲಸವೂ ಇಲ್ಲದೆ, ಹಣವೂ ಇಲ್ಲದೆ ಬೀದಿಪಾಲಾಗಿದೇವೆ. ಹೀಗಾಗಿ ಜಿಲ್ಲಾಧಿಕಾರಿ ಮಧ್ಯ ಪ್ರವೇಶಿಸಿ ಹಣ ಕೊಡಿಸಬೇಕು ಎಂದು ಅವರು ಒತ್ತಾಯಿಸಿದರು. ಶುಶ್ರೂಷಕರಾದ ಬಿಂದು, ಕವಿತಾ, ಸುನಿಲ್, ರಾಘವೇಂದ್ರ, ಚಿಕ್ಕಲಿಂಗು, ಕೆ.ಆರ್. ಸ್ವಾಮಿ, ಸುನಿತಾ, ಸಮಾಜ ಸೇವಕಿ ಭಾನುಮೋಹನ್ ಇದ್ದರು.