4ರಿಂದ ಸುತ್ತೂರಿನಲ್ಲಿ ಕಾರ್ತಿಕ ಮಾಸ ಪೂಜೆ
ಸುತ್ತೂರು: ಶ್ರೀ ಕ್ಷೇತ್ರದಲ್ಲಿ ಶಿವರಾತ್ರೀಶ್ವರ ಶಿವಯೋಗಿಗಳವರ ಕರ್ತೃ ಗದ್ದುಗೆ, ಸೋಮೇಶ್ವರ, ವೀರಭದ್ರೇಶ್ವರ ಮತ್ತು ಮಹದೇಶ್ವರ ದೇವಸ್ಥಾನಗಳಲ್ಲಿ ಕಾರ್ತಿಕ ಮಾಸದಲ್ಲಿ ನ.4ರಿಂದ ಡಿ.2ರವರೆಗೆ ಪ್ರತಿದಿನ ಪ್ರಾತಃಕಾಲ ಮಹಾರುದ್ರಾಭಿಷೇಖ, ಸಹಸ್ರನಾಮ, ಅಷ್ಟೋತ್ತರ ಬಿಲ್ವಾರ್ಚನೆ ಹಾಗೂ ಮಹಾಮಂಗಳಾರತಿ ಮತ್ತು ಪ್ರತಿ ಸೋಮವಾರ ಸಂಜೆ ದೀಪೋತ್ಸವ ಮುಂತಾದ ವಿಶೇಷ ಪೂಜಾ ಕಾರ್ಯಕ್ರಮ ಜರುಗಲಿದೆ. ಸೇವಾರ್ಥ ಸಲ್ಲಿಸಲು ಅಪೇಕ್ಷಿಸುವ ಭಕ್ತಾದಿಗಳು ಸುತ್ತೂರು ಶ್ರೀಕ್ಷೇತ್ರದಲ್ಲಿ ಅಥವಾ ಮೈಸೂರಿನ ಜೆಎಸ್ಎಸ್ ಮಹಾವಿದ್ಯಾಪೀಠದ ಕಾರ್ಯಾಲಯದಲ್ಲಿ ನೇರವಾಗಿ ಅಥವಾ ದೂ. 08221- 232223, 0821- 2548201 ಸಂಪರ್ಕಿಸಬಹುದು.
ಅಧಿಕಾರಿಗಳ ಮೇಲೆ ಹಲ್ಲೆ
ಪಿರಿಯಾಪಟ್ಟಣ: ಕರ್ತವ್ಯದಲ್ಲಿದ್ದ ಎಂಜಿನಿಯರ್ ಹಾಗೂ ಸರ್ಕಾರಿ ವಾಹನ ಚಾಲಕನ ಮೇಲೆ ಗುತ್ತಿಗೆದಾರರೊಬ್ಬರ ಪುತ್ರ ಹಲ್ಲೆ ನಡೆಸಿರುವ ಘಟನೆ ಜರುಗಿದೆ. ಲೋಕೋಪಯೋಗಿ ಇಲಾಖೆಯ ಎಂಜಿನಿಯರ್ ಮರಿಸ್ವಾಮಿ ಹಾಗೂ ಇಲಾಖೆಯ ಜೀಪ್ ಚಾಲಕ ರಮೇಶ್ ಹಲ್ಲೆಗೊಳಗಾದವರು. ಪಟ್ಟಣದಲ್ಲಿ ಬಾಕಿ ಉಳಿದಿರುವ ರಾಜ್ಯ ಹೆದ್ದಾರಿ ಕಾಮಗಾರಿ ಮಾಡಿಸುತ್ತಿರುವ ಮಂಡ್ಯ ಮೂಲದ ಗುತ್ತಿಗೆದಾರ ಬಿ. ಲಿಂಗೇಗೌಡ ಎಂಬವರ ಪುತ್ರ ಶಶಿಕುಮಾರ್ ಎಂಜಿನಿಯರ್ ಹಾಗೂ ಜೀಪ್ ಚಾಲಕನ ಮೇಲೆ ಹಲ್ಲೆ ನಡೆಸಿದ್ದಾರೆ. ಗುರುವಾರ ಕಾಮಗಾರಿ ಪರಿಶೀಲನೆಗೆ ಎಇಇ ಮಂಜುನಾಥ್ ಅವರೊಂದಿಗೆ ತೆರಳಿದ್ದ ಎಂಜಿನಿಯರ್ ಮರಿಸ್ವಾಮಿ ಅವರು ಕಾಮಗಾರಿ ಪರಿಶೀಲಿಸುತ್ತಿದ್ದ ವೇಳೆಯಲ್ಲಿ ಗುತ್ತಿಗೆದಾರನ ಪುತ್ರ ಶಶಿಕುಮಾರ್ ಹಲ್ಲೆ ನಡೆಸಿದ್ದು, ಬಿಡಿಸಲು ಹೋದ ಜೀಪ್ ಚಾಲಕ ರಮೇಶ್ ಮೇಲೂ ಹಲ್ಲೆ ನಡೆಸಿದ್ದಾನೆ. ಈ ಸಂಬಂಧ ಎಂಜಿನಿಯರ್ ಮರಿಸ್ವಾಮಿ ನೀಡಿರುವ ದೂರಿನನ್ವಯ ಸರ್ಕಲ್ ಇನ್ಸ್ಪೆಕ್ಟರ್ ಪ್ರಸನ್ನಕುಮಾರ್ ಹಾಗೂ ಎಸ್ಐ ರಫೀಕ್ ಮಾರ್ಗದರ್ಶನದಲ್ಲಿ ಎಎಸ್ಐ ಸಿದ್ದಯ್ಯ ದೂರು ದಾಖಲಿಸಿಕೊಂಡಿದ್ದಾರೆ.
ಅಪರಿಚಿತ ವ್ಯಕ್ತಿ ಶವ ಪತ್ತೆ
ಮೈಸೂರು: ಅಪರಿಚಿತ ವ್ಯಕ್ತಿಯೊಬ್ಬರು ಅನುಮಾನಸ್ಪದವಾಗಿ ಮೃತಪಟ್ಟಿದ್ದು, ಮೈಸೂರು ತಾಲೂಕು ಹಾರೋಹಳ್ಳಿ ಗ್ರಾಮದ ನಾರಾಯಣ ಎಂಬವರ ಜಮೀನಿನ ಬಳಿಯ ವಿರಿಜಾ ನಾಲೆಯಲ್ಲಿ ಬುಧವಾರ ಶವ ಪತ್ತೆಯಾಗಿದೆ. ಹಸಿರು ಟೀ- ಶರ್ಟ್ ಧರಿಸಿದ್ದು, ಟೀ- ಶರ್ಟ್ ಮೇಲ್ಭಾಗದಲ್ಲಿ ಪೊಲೀಸ್ ಎಂದು ಬರೆಯಲಾಗಿದೆ. ಮೃತರ ವಾರಸುದಾರರು ಇದ್ದಲ್ಲಿ ದೂ. 0821- 2444955 ಸಂಪರ್ಕಿಸಿ.