ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಅಂಗವಿಕಲನ ಅಪ್ಪಟ ಕನ್ನಡ ಅಭಿಮಾನ

Rashmi Kasaragodu
Updated On : 31 Oct 2013, 11:50 am


ಕ.ಪ್ರ.ವಾರ್ತೆ   ಮೈಸೂರು   ಅ. 31
ಯಾವುದೇ ಸಾಹಿತ್ಯಿಕ ಹಾಗೂ ಕನ್ನಡದ ಕಾರ್ಯಕ್ರಮ ಇರಲಿ ಅಲ್ಲಿಗೆ ರಾ.ರಮಾಕಾಂತ ಹಾಜರು. ಆದರೆ ಅವರು ಕರೆಯದೇ ಬರುವ ಸಭಿಕ ಮಹಾಶಯ. ಎಲ್ಲಕ್ಕಿಂತ ಮಿಗಿಲಾಗಿ ಕನ್ನಡದ ಅಪ್ಪಟ ಅಭಿಮಾನಿ.
ಇವರು ವಿಕಲಚೇತನರು. ತ್ರಿಚಕ್ರ ವಾಹನವೇ ಇವರಿಗೆ ಆಶ್ರಯ. ಹೀಗಿದ್ದರೂ ಕನ್ನಡಪರ ಕಾರ್ಯಕ್ರಮ ಮೈಸೂರಿನ ಯಾವುದೇ ಮೂಲೆಯಲ್ಲಿ ನಡೆಯಲಿ ಅಲ್ಲಿಗೆ ಬರುತ್ತಾರೆ. ರಮಾಕಾಂತ ಕನ್ನಡದ ಐಚ್ಚಿಕ ವಿಷಯದಲ್ಲಿ ಪದವೀಧರ. ಕನ್ನಡ ಭಾಷಾಭಿಮಾನದ ಜತೆಗೆ ಸಾಹಿತ್ಯದ ಅಭಿಮಾನವೂ ಅಪಾರ. ಅನೇಕ ಕವಿತೆ ಹಾಗೂ ಲೇಖನಗಳನ್ನು ಬರೆದಿದ್ದು, ಅವುಗಳು ರಾಜ್ಯಮಟ್ಟದ ನಿಯತಕಾಲಿಕೆಗಳಲ್ಲಿ ಪ್ರಕಟವಾಗಿವೆ. ಜೊತೆಗೆ ಕೆಲವು ಬಹುಮಾನವನ್ನೂ ಗಳಿಸಿವೆ.
ಅವರು ತಮ್ಮ ತ್ರಿಚಕ್ರ ವಾಹನದಲ್ಲಿ ವೃತ್ತ ಪತ್ರಿಕೆ ಹಾಗೂ ಪುಸ್ತಕವನ್ನು ಇರಿಸಿಕೊಂಡಿರುತ್ತಾರೆ. ಬಿಡುವಿನ ವೇಳೆ ಯಾವುದಾದರೂ ಮರದ ಕೆಳಗೆ ಅದೇ ವಾಹನ ನಿಲ್ಲಿಸಿ ಆರಾಮವಾಗಿ ಕುಳಿತು ಓದುತ್ತಾರೆ. ಮನೆಯಿಂದ ಕಚೇರಿಗೆ ಹೋಗುವಾಗ ಯಾರಾದರೂ ವಯೋವೃದ್ಧರೋ, ಅಂಗವಿಕಲರೋ ನಡೆದು ಹೊಗುತ್ತಿದ್ದರೆ ಅವರನ್ನು ತ್ರಿಚಕ್ರ ವಾಹನದಲ್ಲಿ ಕೂರಿಸಿಕೊಂಡು ಹೋಗುವ ಸೇವೆ ಮೆಚ್ಚುವ ಸಂಗತಿ. ಮೈಸೂರು ಹುಣಸೂರು ರಸ್ತೆಯ ಜಲದರ್ಶಿನಿ ಕ್ವಾರ್ಟಸ್ನಲ್ಲಿ ನೆಲೆಸಿರುವ ಇವರು ಸಯ್ಯಾಜಿರಾವ್ ರಸ್ತೆಯಲ್ಲಿರುವ ಜಿಲ್ಲಾ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯ ಉಪನಿರ್ದೇಶಕರ ಕಚೇರಿಯಲ್ಲಿ ಪ್ರಥಮ ದರ್ಜೆ ಸಹಾಯಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಮೂಲತಃ ಚಿತ್ರದುರ್ಗದವರಾದ ಇವರ ತಂದೆ ಕನ್ನಡ ಪಂಡಿತ ಪಿ. ರಾಮಕೃಷ್ಣಪ್ಪ, ತಾಯಿ ತಿಪ್ಪಮ್ಮ. ರಾಮಕೃಷ್ಣಪ್ಪ  ಶಿಕ್ಷಕರಾಗಿ ರಾಜ್ಯ ಪ್ರಶಸ್ತಿ ಪಡೆದವರು. ತಂದೆಯ ಕನ್ನಡ ಪ್ರೇಮವೇ ರಮಾಕಾಂತರಿಗೆ ಬಳವಳಿ.    
ಅಂಗವಿಕಲರಾದರೂ ಯಾವುದೇ ಧೃತಿಗೆಡದೆ, ಶಿಕ್ಷಣ ಪಡೆದು ಉದ್ಯೋಗ ದೊರಕಿಸಿಕೊಂಡು ಜೀವನ ನಿರ್ವಹಿಸುತ್ತಾ,  ತಮ್ಮ ಮಕ್ಕಳಾದ ಆಕರ್ಷ್ ಹಾಗೂ ಅಭಿಲೇಖ ಅವರನ್ನೂ ಸಹ ಪದವೀಧರರನ್ನಾಗಿ ಮಾಡಿದ್ದಾರೆ. ಪತ್ನಿ ಅನ್ನಪೂರ್ಣರೊಂದಿಗೆ ಕುಟುಂಬ ನಿರ್ವಹಿಸುತ್ತಿರುವ ರಮಾಕಾಂತರಿಗೆ ಆಗ 55 ವರ್ಷ.


  ಮಾ. ವೆಂಕಟೇಶ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement