ಗೋದಾಮಿಗೆ ಆಕಸ್ಮಿಕ ಬೆಂಕಿ
ಮೈಸೂರು: ನಗರದ ಬನ್ನಿಮಂಟಪದ ಬಾಲಭವನ ಬಳಿಯ ಹಳೇ ಪೇಪರ್ ಗೋದಾಮಿನಲ್ಲಿ ಬೆಂಕಿ ಹೊತ್ತಿಕೊಂಡು ಲಕ್ಷಾಂತರ ರು. ಮೌಲ್ಯದ ನಷ್ಟ ಉಂಟಾಗಿರುವ ಘಟನೆ ಗುರುವಾರ ಬೆಳಗ್ಗೆ ನಡೆದಿದೆ. ಎನ್.ಆರ್. ಮೊಹಲ್ಲಾ ನಿವಾಸಿ ನಸೀರುಲ್ಲಾ ಎಂಬವರಿಗೆ ಸೇರಿದ ಗೋದಾಮಿನಲ್ಲಿ ಬೆಂಕಿ ಹೊತ್ತಿಕೊಂಡಿದ್ದು, ಸಾರ್ವಜನಿಕರ ಮಾಹಿತಿ ಮೇರೆಗೆ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಸತತ ನಾಲ್ಕು ಗಂಟೆ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು. ಅಗ್ನಿಶಾಮಕ ಅಧಿಕಾರಿಗಳಾದ ಬಸವಣ್ಣ, ಶಿವಣ್ಣೇಗೌಡ, ಎಚ್. ರಾಜು ಮತ್ತು ಸಿಬ್ಬಂದಿ ಬೆಂಕಿ ಆರಿಸುವ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಗೋದಾಮಿನಲ್ಲಿ 5 ಲಕ್ಷ ಮೌಲ್ಯದ ಹಳೇ ಪೇಪರ್ ಸಂಗ್ರಹಿಸಿದ್ದು, ಬೆಂಕಿಯಿಂದಾಗಿ 2 ಲಕ್ಷ ಮೌಲ್ಯದ ಪೇಪರ್ ಸುಟ್ಟು ಕರಕಲಾಗಿದೆ. ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದ ಈ ಬೆಂಕಿ ಅನಾಹುತ ಸಂಭವಿಸಿಲ್ಲ. ಯಾರೋ ಉದ್ದೇಶಪೂರ್ವಕವಾಗಿ ಬೆಂಕಿ ಹಚ್ಚಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಈ ಸಂಬಂಧ ಮಂಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಯಿಷ್ನಲ್ಲಿ ಬೆಂಕಿ: ನಗರದ ಮಾನಸಗಂಗೋತ್ರಿಯಲ್ಲಿರುವ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯ (ಆಯಿಷ್) ಮಹಿಳಾ ಹಾಸ್ಟೆಲ್ನಲ್ಲಿ ಬುಧವಾರ ಮಧ್ಯರಾತ್ರಿ ಸಣ್ಣ ಪ್ರಮಾಣದ ಬೆಂಕಿ ಅವಘಡ ಸಂಭವಿಸಿದೆ. ಕೆಲವು ವಿದ್ಯಾರ್ಥಿನಿಯರು ಎಗ್ಬುರ್ಜಿ ಮಾಡಲು ಗ್ಯಾಸ್ ಸ್ಟೌ ಹಚ್ಚುತ್ತಿದ್ದಂತೆ ಸಿಲಿಂಡರ್ನ ರೆಗ್ಯುಲೇಟರ್ ಬಳಿ ಗ್ಯಾಸ್ ಸೋರಿಕೆಯಾಗಿ ಬೆಂಕಿ ಹೊತ್ತುಕೊಂಡಿದೆ.