ಪೇಜಾವರ ಶ್ರೀಗಳ ಧೋರಣೆ ಖಂಡಿಸಿ ಪ್ರತಿಭಟನೆ
ಕ.ಪ್ರ.ವಾರ್ತೆ ಮೈಸೂರು ಅ. 31
ತಮ್ಮ ಹೇಳಿಕೆ ಮೂಲಕ ಸಾಮಾಜಿಕ ಸ್ವಾಸ್ಥ್ಯಕ್ಕೆ ಧಕ್ಕೆ ಉಂಟು ಮಾಡುತ್ತಿರುವ ಉಡುಪಿ ಪೇಜಾವರ ಮಠದ ವಿಶ್ವೇಶತೀರ್ಥ ಶ್ರೀಪಾದರ ವಿರುದ್ಧ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ನೇತೃತ್ವದಲ್ಲಿ ವಿವಿಧ ಸಂಘಟನೆಯವರು ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ಪ್ರತಿಭಟಿಸಿದರು.
ಸಾಮಾಜಿಕ ಅಸಮತೋಲನ ಸೃಷ್ಟಿಸಿ ಜಾತಿ ಜಾತಿಗಳ ನಡುವೆ ವಿಷಬೀಜ ಬಿತ್ತಿ ಸಮಾಜಕ್ಕೆ ಮಾರಕವಾಗುತ್ತಿರುವ ಪೇಜಾವರ ಶ್ರೀ ಹೇಳಿಕೆ ಖಂಡನೀಯ. ಪೇಜಾವರ ಶ್ರೀ ಕನಕದಾಸರ ವಿರುದ್ಧ ದಿಕ್ಕಿನಲ್ಲಿ ಹೊರಟು ನಾಡಿನಲ್ಲಿ ಶಾಂತಿ ಕದಡಿ ಸಮಾಜದಲ್ಲಿ ಕಲುಷಿತ ವಾತಾವರಣ ನಿರ್ಮಿಸಲು ಹೊರಟಿದ್ದಾರೆ ಎಂದು ಆರೋಪಿಸಿದರು.
ಕನಕದಾಸರ ನಾಮಬಲದಿಂದ ಪ್ರತಿಷ್ಠೆ, ಕೀರ್ತಿ, ಹಣ ಗಳಿಸಿದ ಪೇಜಾವರ ಶ್ರೀಗಳು ಕನಕನ ಅನುಯಾಯಿಗಳಿಂದಲೇ ಕನಕದಾಸರಿಗೆ ಅಪಚಾರವಾಗುತ್ತಿದೆ ಎಂದು ಹೇಳಿ ಅಪಪ್ರಚಾರ ಮಾಡಿ ಸಮಾಜದ ದಿಕ್ಕು ತಪ್ಪಿಸುತ್ತಿದ್ದಾರೆ. ಈಗಲಾದರೂ ಪೇಜಾವರ ಶ್ರೀ ಎಚ್ಚೆತ್ತುಕೊಂಡು ತಮ್ಮ ಹೇಳಿಕೆ ವಾಪಸ್ ಪಡೆಯಬೇಕು. ಕುರುಬರು, ದಲಿತರು ಮತ್ಯಾರಿಗೋ ವೈಷ್ಣವ ದೀಕ್ಷೆ ನೀಡುವ ವಿಚಾರವನ್ನು ಪೇಜಾವರ ಶ್ರೀ ಕೈಬಿಟ್ಟು, ಮಾನವಿಯತೆ ದೀಕ್ಷೆ ಪಡೆಯಲಿ ಎಂದು ಸಲಹೆ ನೀಡಿದರು.
ಕನಕದಾಸರ ಹೆಸರಿನಲ್ಲಿ ಕೃಷ್ಣ ಮಠದ ಸಾರ್ವಜನಿಕರ ಹಣ ಲೂಟಿ ಮಾಡುತ್ತ, ಕನಕ ಕೃಷ್ಣರಿಗೆ ಅಪಚಾರವೆಸುಗತ್ತಾ, ಕೃಷ್ಣ ದೇವಸ್ಥಾನವನ್ನು ಅಷ್ಟ ಮಠಗಳು ತಮ್ಮ ಸ್ವಾರ್ಥ ಸಾಧನೆಗೆ ಪೇಜಾವರ ಶ್ರೀ ನೇತೃತ್ವದಲ್ಲಿ ಬಳಸಿಕೊಳ್ಳುತ್ತಿರುವುದು ವಿಷಾದನಿಯ. ಹೀಗಾಗಿ ಕೂಡಲೇ ಉಡುಪಿ ಕೃಷ್ಣ ದೇವಸ್ಥಾನವನ್ನು ರಾಜ್ಯ ಸರ್ಕಾರದ ಮುಜರಾಯಿ ಇಲಾಖೆ ವಾಪಸ್ ಪಡೆದು, ಕನಕ, ಕೃಷ್ಣರಿಗೆ ಗೌರವ ತಂದುಕೊಡಬೇಕು ಎಂದು ಒತ್ತಾಯಿಸಿದರು. ಮುಂದಿನ ದಿನಗಳಲ್ಲಿ ಪೇಜಾವರ ಶ್ರೀ ಧೋರಣೆ ಖಂಡಿಸಿ ಉಡುಪಿ ಚಲೋ ಕಾರ್ಯಕ್ರಮ ಹಮ್ಮಿಕೊಂಡು ಕೃಷ್ಣ, ಕನಕರ ಅನುಯಾಯಿಗಳೇ ಕೃಷ್ಣ ದೇವಸ್ಥಾನ ವಶಕ್ಕೆ ಪಡೆಯಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು. ಇದೇ ವೇಳೆ ಪೇಜಾವರ ಶ್ರೀ ಭಾವಚಿತ್ರವನ್ನು ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.
ಕಾಗಿನೆಲೆ ಕನಕ ಗುರುಪೀಠದ ಶಿವಾನಂದಪುರಿ ಸ್ವಾಮೀಜಿ, ಗುರುಲಿಂಗ ಪೆದ್ದಿ ಪೀಠದ ಜ್ಞಾನಪ್ರಕಾಶ ಸ್ವಾಮೀಜಿ, ವೇದಿಕೆಯ ರಾಜ್ಯಾಧ್ಯಕ್ಷ ಕೆ.ಎಸ್. ಶಿವರಾಮು, ಸಂಚಾಲಕ ಶಶಿಧರ್ ಸಂಗಾಪುರ, ವಿಶ್ರಾಂತ ಕುಲಪತಿ ಪ್ರೊ.ಎಚ್.ಜೆ. ಲಕ್ಕಪ್ಪಗೌಡ, ಸಾಹಿತಿ ಮಾನಸ, ಮಾಜಿ ಮೇಯರ್ಗಳಾದ ಟಿ.ಬಿ. ಚಿಕ್ಕಣ್ಮ, ಪುರುಷೋತ್ತಮ್, ಪಾಲಿಕೆ ಮಾಜಿ ಸದಸ್ಯರಾದ ಎಂ. ಶಿವಣ್ಣ, ಮಂಜುನಾಥ್, ಜಿಪಂ ಮಾಜಿ ಅಧ್ಯಕ್ಷ ಕೆ.ಸಿ. ಬಲರಾಂ, ಜಿಪಂ ಸದಸ್ಯ ದ್ವಾರಕೀಶ್, ವಿವಿಧ ಸಂಘಟನೆಗಳ ಮುಖಂಡರಾದ ಹಿನಕಲ್ ಪ್ರಕಾಶ್, ಹಿನಕಲ್ ಉದಯ್, ಸಿ.ಟಿ. ಆಚಾರ್ಯ, ರೇಖಾ, ಲ. ಜಗನ್ನಾಥ್, ಕೆ. ಮುದ್ದುಕೃಷ್ಣ, ಎಚ್.ಎಸ್. ಪ್ರಕಾಶ್, ಶೌಕತ್ ಅಲಿ ಖಾನ್, ಪಿ. ರಾಜು ಇದ್ದರು.