ಮೋದಿ ಬೆಂಬಲಿಸಿ, ಕುಟುಂಬ ರಾಜಕಾರಣಕ್ಕೆ ಅಂತ್ಯ ಹಾಡಿ
ಕ.ಪ್ರ.ವಾರ್ತೆ ಟಿ.ನರಸೀಪುರ ಅ. 31
ಲೋಕಸಭೆ ಸಾರ್ವತ್ರಿಕ ಚುನಾವಣೆಯಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿಗೆ ಕೇಂದ್ರದಲ್ಲಿ ಅಧಿಕಾರ ನೀಡುವ ಮೂಲಕ ದೇಶದ ಜನತೆ ಕುಟುಂಬ ರಾಜಕಾರಣವನ್ನು ಕೊನೆಗಾಣಿಸಬೇಕು ಎಂದು ವರುಣ ಬಿಜೆಪಿ ಕ್ಷೇತ್ರಾಧ್ಯಕ್ಷ ಶಿವನಂಜಪ್ಪ ಹೇಳಿದರು.
ಕಾಂಗ್ರೆಸ್ ನೇತೃತ್ವದ ಯುಪಿಎ ಕೇಂದ್ರ ಸರ್ಕಾರದ ಆಡಳಿತದ ವೈಫಲ್ಯದಿಂದ ರಾಷ್ಟ್ರದ ಸಾರ್ವಭೌಮತ್ವಕ್ಕೆ ಧಕ್ಕೆಯಾಗಿದೆ. ಮತದಾರರು ಜಾಗೃತರಾಗಿ ಮುಂಬರುವ ಲೋಕಸಭಾ ಚುನಾವಣೆಯಲ್ಲಾದರೂ ಕಾಂಗ್ರೆಸ್ ಆಡಳಿತಕ್ಕೆ ಮುಕ್ತಿ ನೀಡಬೇಕು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಬೆಂಗಳೂರಿನ ಅರಮನೆ ಮೈದಾನದಲ್ಲಿ ನ.17 ರಂದು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರ ಸಮಾವೇಶ ನಡೆಯುವ ಹಿನ್ನೆಲೆ, ವರುಣ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ 32 ಸ್ಥಾನೀಯ ಸಮಿತಿಗಳ ಮುಖಂಡರ ಮೂಲಕ ಕರಪತ್ರಗಳು ಮತ್ತು ಪ್ರವೇಶದ ಟಿಕೆಟ್ಗಳನ್ನು ವಿತರಿಸಲಾಗುತ್ತಿದೆ. ನ.7 ರಿಂದ 10ರವರೆಗೆ ಸ್ಥಾನೀಯ ಸಮಿತಿಗಳ ಕಾರ್ಯವೈಖರಿಯನ್ನು ಮುಖಂಡರ ತಂಡ ಪರಿಶೀಲಿಸಲಿದೆ ಎಂದು ತಿಳಿಸಿದರು.
ಇದೇ ವೇಳೆ ನ.17ರ ನರೇಂದ್ರ ಮೋದಿ ಅವರ ಸಮಾವೇಶಕ್ಕೆ ಆಗಮಿಸುವ ವರುಣ ವಿಧಾನಸಭಾ ಕ್ಷೇತ್ರದ ಕಾರ್ಯಕರ್ತರಿಗೆ 10 ಪಡೆದು ಟಿಕೆಟ್ ವಿತರಿಸಲಾಯಿತು. ರಾಜ್ಯ ಪರಿಷತ್ ಸದಸ್ಯ ಪಿ. ನಟರಾಜು, ವರುಣ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಂಜುನಾಥ, ಶಿವಬಸಪ್ಪ, ಗ್ರಾಪಂ ಮಾಜಿ ಸದಸ್ಯ ನಾಗರಾಜು, ಟೌನ್ ಅಧ್ಯಕ್ಷ ದಿಲೀಪ್, ಮುಖಂಡ ಮಹದೇವಣ್ಣ, ಹುಂಡಿ ಮಹದೇವಸ್ವಾಮಿ ಇದ್ದರು.