ನಗರಕ್ಕೆ ತಂಪೆರೆದ ಮಳೆ
ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಸೋಮವಾರ ಮಧ್ಯಾಹ್ನ ಮಳೆ ಸುರಿದು ತಂಪೆರೆಯಿತು. ಕಳೆದ ಕೆಲವು ದಿನಗಳಿಂದ ನಗರದಲ್ಲಿ ಬಿಸಿಲಿನ ಪ್ರಮಾಣ ಹೆಚ್ಚಾಗಿತ್ತು. ಸೋಮವಾರ ಬೆಳಗ್ಗೆ ಸಹ ಬಿಸಿಲಿನ ತಾಪ ಹೆಚ್ಚಿತ್ತು. ಮಧ್ಯಾಹ್ನದ ವೇಳೆಗೆ ಗುಡುಗಿನೊಂದಿಗೆ ಮೋಡ ಕವಿದ ವಾತಾವರಣ ನಿರ್ಮಾಣವಾಗಿ, ಅರ್ಧ ಗಂಟೆಗೂ ಹೆಚ್ಚಿನ ಕಾಲ ಮಳೆ ಆಯಿತು. ಕೆಲವು ತಗ್ಗು ಪ್ರದೇಶಕ್ಕೆ ಮಾತ್ರ ನೀರು ನುಗ್ಗಿದೆ. ಕೆಲವು ಕಡೆ ಮರದ ಕೊಂಬೆಗಳು ಮುರಿದು ಬಿದ್ದಿವೆ. ಇದನ್ನು ಹೊರತುಪಡಿಸಿ ಮಳೆಯಿಂದಾಗಿ ಯಾವುದೇ ಅನಾಹುತ ಸಂಭವಿಸಿಲ್ಲ.
ಉರುಳಿಗೆ ಸಿಲುಕಿ ಜಿಂಕೆ ಸಾವು
ಹುಣಸೂರು: ಎರಡು ವರ್ಷದ ಜಿಂಕೆಯೊಂದು ಉರುಳಿಗೆ ಸಿಲುಕಿ ಮೃತಪಟ್ಟಿರುವ ಘಟನೆ ತಾಲೂಕಿನ ಬೀರತಮ್ಮನಹಳ್ಳಿ ಪ್ರಾದೇಶಿಕ ಅರಣ್ಯದಲ್ಲಿ ಸೋಮವಾರ ಜರುಗಿದೆ. ತಾಲೂಕಿನ ಹನಗೋಡು ಹೋಬಳಿಯ ಬೀರತಮ್ಮನಹಳ್ಳಿ ಗ್ರಾಮಕ್ಕೆ ಸೇರಿದ ಪಿರಿಯಾಪಟ್ಟಣ ಪ್ರಾದೇಶೀಕ ಅರಣ್ಯ ಪ್ರದೇಶದಲ್ಲಿ ಸೋಮವಾರ ಬೆಳಗಿನ ಜಾವದಲ್ಲಿ ಕಳ್ಳಬೇಟೆಗಾರರು ತಂತಿ ಹಾಗೂ ವೈರ್ಗೆ ಕಟ್ಟಿರುವ ಉರುಳಿಗೆ ಎರಡು ವರ್ಷದ ಹೆಣ್ಣು ಜಿಂಕೆಯು ಸಿಕ್ಕಿಕೊಂಡು ಮೃತಪಟ್ಟಿದೆ. ಸ್ಥಳಕ್ಕೆ ಪಿರಿಯಾಪಟ್ಟಣ ಪ್ರಾದೇಶಿಕ ವಲಯ ಅರಣ್ಯಾಧಿಕಾರಿ ಚಿನ್ನಪ್ಪ, ವನಪಾಲಕ ಸುಂದರ್ ಭೇಟಿ ನೀಡಿ, ಸ್ಥಳ ಪರಿಶೀಲನೆ ನಡೆಸಿದರು. ಆರೋಪಿಗಳ ಪತ್ತೆಗೆ ಕ್ರಮ ವಹಿಸಲಾಗಿದೆ ಎಂದು ತಿಳಿಸಿದ್ದಾರೆ. ಜಿಂಕೆಯ ಮರಣೋತ್ತರ ಪರೀಕ್ಷೆಯನ್ನು ಡಾ. ಶಶಿಧರ್ ನಡೆಸಿದರು. ಭಾನುವಾರ ಪಿರಿಯಾಪಟ್ಟಣ ತಾ. ಬೈಲುಕುಪ್ಪೆ ಬಳಿ ಉರುಳಿಗೆ ಸಿಕ್ಕಿ ಚಿರತೆ ಸಾವಿಗೀಡಾಗಿದ್ದನ್ನು ಇಲ್ಲಿ ಸ್ಮರಿಸಬಹುದು.
ಶಿಂಷಾದಲ್ಲಿ ಯುವಕ ಸಾವು
ಹಲಗೂರು: ಇಲ್ಲಿಗೆ ಸಮೀಪದ ತೊರೆಕಾಡನಹಳ್ಳಿ ಬಳಿ ಹರಿಯುತ್ತಿರುವ ಶಿಂಷಾ ನದಿಯಲ್ಲಿ ಈಜಲು ಹೋದ ಜೆ. ಪ್ರಸನ್ನಕುಮಾರ್(31) ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ. ಮೂಲತಃ ಮೈಸೂರಿನ ಮೆಟಗಳ್ಳಿಯಲ್ಲಿ ವಾಸವಾಗಿರುವ ಜಯರಾಮಯ್ಯನ ಮಗನಾದ ಜೆ. ಪ್ರಸನ್ನಕುಮಾರ್, ಹಲಗೂರು ಸಮೀಪದ ಧನಗೂರು ಗ್ರಾಮದ ಬಳಿ ಇರುವ ಬಂಡೂರು ಕುರಿ ಫಾರಂನ ಅಭಿವೃದ್ಧಿ ಕೇಂದ್ರದಲ್ಲಿ ತರಬೇತಿಗಾಗಿ ಬಂದಿದ್ದ. ಈತ ಧನಗೂರು ಕುರಿ ಫಾರಂಗೆ ಹೋಗುವ ಮಾರ್ಗ ಮಧ್ಯೆ ಸಿಗುವ ಶಿಂಷಾ ನದಿಯಲ್ಲಿ ಈಜಲು ಹೋಗಿ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಮೃತಪಟ್ಟಿರುತ್ತಾನೆ. ಈತನ ಶವ ಭಾನುವಾರ ಸಂಜೆಯವರೆಗೂ ಸಿಗದ ಕಾರಣ ಮಳವಳ್ಳಿಯ ಅಗ್ನಿಶಾಮಕ ದಳದವರು ಸೋಮವಾರ ಶವವನ್ನು ಹೊರ ತೆಗೆದ ನಂತರ ವೈದ್ಯಾಧಿಕಾರಿ ಡಾ. ಲತಾ ಶವ ಪರೀಕ್ಷೆ ನಡೆಸಿದ ನಂತರ ಶವವನ್ನು ವಾರಸ್ಸು ದಾರರಿಗೆ ಒಪ್ಪಿಸಲಾಯಿತು. ಎಸ್ಐ ಗಂಗಾಧರ್ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬಸ್ ಉರುಳಿ 9 ಮಂದಿಗೆ ಗಾಯ
ಮೈಸೂರು: ಚಾಲಕನ ನಿಯಂತ್ರಣ ತಪ್ಪಿ ಕೆಎಸ್ಸಾರ್ಟಿಸಿ ನಗರ ಸಾರಿಗೆ ಬಸ್ ಉರುಳಿ ಬಿದ್ದು 9 ಮಂದಿ ಗಾಯಗೊಂಡಿರುವ ಘಟನೆ ಸೋಮವಾರ ಮಧ್ಯಾಹ್ನ ನಡೆದಿದೆ. ಬೀರಿಹುಂಡಿ- ಮೈಸೂರು ನಗರ ಬಸ್ ನಿಲ್ದಾಣ ನಡುವೆ ಸಂಚರಿಸುತ್ತಿದ್ದ ಸಾರಿಗೆ ಬಸ್ಸು ಗದ್ದಿಗೆ ರಸ್ತೆಯಲ್ಲಿರುವ ಕುಮಾರಬೀಡು ಬಳಿ ಚಾಲಕ ನಿಯಂತ್ರಣ ತಪ್ಪಿ ಕಲ್ಲು ಕಂಬಕ್ಕೆ ಡಿಕ್ಕಿಯಾಗಿದೆ. ಈ ವೇಳೆ ಚಾಲಕ ಇದ್ದಕ್ಕಿದ್ದಂತೆ ಬ್ರೇಕ್ ಹಾಕಿದ್ದರಿಂದ ಬಸ್ ಉರುಳಿ ಬಿದ್ದಿದೆ. ಬಸ್ಸಿನಲ್ಲಿದ್ದ ಶೆಟ್ಟಿನಾಯಕನಹಳ್ಳಿ ನಿವಾಸಿಗಳಾದ ಅಭಿಷೇಕ್ (16), ಅವಿನಾಶ್, ಮಂಜುಳ (17), ಚಂದ್ರಕುಮಾರ್ (16), ಅಭಿಲಾಷ್, ಕುಮಾರಬೀಡು ಕಿರಣ್ಕುಮಾರ್ (17), ಎಡತೋರೆಯ ಅನಿಲ್ಕುಮಾರ್ (17), ಬೆಟ್ಟದಬೀಡು ಕೆಂಪಮ್ಮ (50) ಮತ್ತು ಬೀರಿಹುಂಡಿ ಸಂತೋಷ್ (28) ಗಾಯಗೊಂಡವರು. ಗಾಯಾಳುಗಳು ಕೆ.ಆರ್. ಆಸ್ಪತ್ರೆ ಹಾಗೂ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬೀರಿಹುಂಡಿಯಿಂದ ಮೈಸೂರು ಕಡೆಗೆ ಬರುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಬಸ್ಸಿನಲ್ಲಿ 40 ಮಂದಿ ಪ್ರಯಾಣಿಕರಿದ್ದು, ಸಣ್ಣಪುಟ್ಟ ಗಾಯಗಳೊಂದಿಗೆ ಎಲ್ಲರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಈ ಸಂಬಂಧ ಇಲವಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.