ಪತ್ನಿಗೆ ಕಿರುಕುಳ: ಪತಿಗೆ 1 ವರ್ಷ ಜೈಲು
ಮೈಸೂರು: ಪತ್ನಿಗೆ ಕಿರುಕುಳ ನೀಡಿದ ಪತಿಗೆ ಮೈಸೂರಿನ ನ್ಯಾಯಾಲಯವು 1 ವರ್ಷ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕು ಕೆನ್ನಾಳು ನಿವಾಸಿ ಕೆ.ಸಿ. ದಿವಾಕರ ಶಿಕ್ಷೆಗೆ ಗುರಿಯಾದವನು. ಮೈಸೂರಿನ ರಾಘವೇಂದ್ರ ನಿವಾಸಿ ಲಕ್ಷ್ಮಿಯನ್ನು ದಿವಾಕರ ವಿವಾಹವಾಗಿದ್ದು, ಇಬ್ಬರು ಮಕ್ಕಳಿದ್ದಾರೆ. ಪ್ರತಿದಿನ ಕುಡಿದು ಬರುತ್ತಿದ್ದ ದಿವಾಕರ ಗಲಾಟೆ ಮಾಡಿ ಪತ್ನಿ ಮತ್ತು ಮಕ್ಕಳ ಮೇಲೆ ಹಲ್ಲೆ ನಡೆಸುತ್ತಿದ್ದ, ಸೀಮೆಎಣ್ಣೆ ಸುರಿದು ಸಾಯಿಸುವುದಾಗಿ ಪ್ರಾಣ ಬೆದರಿಕೆ ಹಾಕುತ್ತಿದ್ದ. ಈ ಸಂಬಂಧ ಮೈಸೂರಿನ ಮಹಿಳಾ ಠಾಣೆ ಪೊಲೀಸರು ಪ್ರಕರಣ ದಾಖಲಾಗಿತ್ತು. ಈ ಪ್ರಕರಣ ವಿಚಾರಣೆ ನಡೆಸಿದ 4ನೇ ಹೆಚ್ಚುವರಿ (ಹಿರಿಯ ಶ್ರೇಣಿ) ಮತ್ತು ಸಿಜೆಎಂ ನ್ಯಾಯಾಧೀಶರಾದ ದಿನೇಶ್ ಹೆಗಡೆ ಅವರು ದಿವಾಕರ ಮೇಲಿನ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ 1 ವರ್ಷ ಸಾದ ಶಿಕ್ಷೆ ಹಾಗೂ 25 ಸಾವಿರ ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕ ಎಸ್. ಶಿವಕುಮಾರ್ ವಾದಿಸಿದ್ದರು.