ಪಾಲಿಕೆ ಆಯುಕ್ತರಾಗಿ ಡಾ. ರವಿ ಅಧಿಕಾರ ಸ್ವೀಕಾರ
ಕ.ಪ್ರ.ವಾರ್ತೆ ಮೈಸೂರು ಸೆ. 3
ಕಳೆದ ಮಾರ್ಚ್ನಲ್ಲಿ ವಿಧಾನಸಭೆ ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಬೇರೆಡೆಗೆ ವರ್ಗಾವಣೆಯಾಗಿದ್ದ ಡಾ.ಎಂ.ಆರ್. ರವಿ ಅವರು ಪುನಃ ಮೈಸೂರು ನಗರಪಾಲಿಕೆ ಆಯುಕ್ತರಾಗಿ ಮಂಗಳವಾರ ಅಧಿಕಾರ ವಹಿಸಿಕೊಂಡರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಸ್ವಚ್ಛತೆ, ಅಭಿವೃದ್ಧಿ ಮತ್ತು ಬೀದಿದೀಪ ನಿರ್ವಹಣೆ ನನ್ನ ಪ್ರಮುಖ ಆದ್ಯತಾ ವಲಯಗಳು. ಮುಖ್ಯಮಂತ್ರಿಗಳು ಮೈಸೂರಿನವರೆ ಆಗಿರುವುದರಿಂದ ಈ ಬಾರಿಯ ದಸರಾವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುವುದು ಎಂದರು.
ದಸರಾ ಸಂಬಂಧ ನಡೆಯುತ್ತಿರುವ ಕಾಮಗಾರಿಗಳನ್ನು ಆದಷ್ಟು ಶೀಘ್ರಗತಿಯಲ್ಲಿ ಪೂರ್ಣಗೊಳಿಸಲಾಗುವುದು. ಕಳಪೆ ಕಾಮಗಾರಿ ಮಾಡಿರುವ ಗುತ್ತಿಗೆದಾರರ ಪಟ್ಟಿ ಮಾಡಲಾಗಿದ್ದು, ಕೂಡಲೇ ಕಪ್ಪುಪಟ್ಟಿಗೆ ಸೇರಿಸಲಾಗುವುದು. ಆದ್ದರಿಂದ ಗುತ್ತಿಗೆದಾರರು ಜವಾಬ್ದಾರಿಯುತವಾಗಿ ಕಾಮಗಾರಿ ನಡೆಸಬೇಕು. ಗುತ್ತಿಗೆದಾರರಿಗೆ ನೀಡುವ ಬಿಲ್ ಬಾಕಿ ಇದ್ದಲ್ಲಿ ತಕ್ಷಣವೇ ವಿಲೇವಾರಿ ಮಾಡಲಾಗುವುದು ಎಂದರು.
ಈವರೆಗೆ ಪಾಲಿಕೆ ಆಯುಕ್ತರಾಗಿದ್ದ ಪಿ.ಜಿ. ರಮೇಶ್ ಅವರಿಗೆ ಯಾವುದೇ ಹುದ್ದೆ ತೋರಿಸಿಲ್ಲ.