ಮಾವುತರು, ಕಾವಾಡಿಗಳ ಆರೋಗ್ಯ ತಪಾಸಣೆ
ಕ.ಪ್ರ. ವಾರ್ತೆ, ಮೈಸೂರು, ಸೆ.3
ದಸರಾ ಆನೆಗಳೊಂದಿಗೆ ಆಗಮಿಸಿರುವ ಮಾವುತರು, ಕಾವಾಡಿಗಳು ಮತ್ತು ಅವರ ಕುಟುಂಬದ ಸದಸ್ಯರ ಅರೋಗ್ಯ ತಪಾಸಣೆಯು ಅರಮನೆಯ ಆವರಣದಲ್ಲಿ ಮಂಗಳವಾರ ನಡೆಯಿತು.
ಮೈಸೂರು ಕನ್ನಡ ವೇದಿಕೆ, ವಿ- ಕೇರ್ ಸಂಸ್ಥೆ ಹಾಗೂ ಮಾಲಿಕ್ಯುಲಾರ್ ಕೇರ್ ಲ್ಯಾಬ್ ಸಂಯುಕ್ತವಾಗಿ ಈ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಿದ್ದವು. ಆನೆಗಳ ಮಾವುತರು- ಕಾವಾಡಿಗಳಾದ ದೊಡ್ಡ ಮಾಸ್ತಿ, ತಿಮ್ಮ, ಗುಂಡ, ವಸಂತ, ರಾಮ, ರಮೇಶ, ಗಣೇಶ, ರಾಜು, ರಾಜು, ಮಂಜು ಮತ್ತು ಅವರ ಕುಟುಂಬದ ಸದಸ್ಯರು ಸೇರಿದಂತೆ 30ಕ್ಕೂ ಹೆಚ್ಚು ಮಂದಿಯ ಆರೋಗ್ಯ ತಪಾಸಣೆ ನಡೆಸಿ ಉಚಿತವಾಗಿ ಔಷಧಿ ವಿತರಿಸಲಾಯಿತು.
ಕೆ.ಆರ್. ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಮೋಹನ್ಕುಮಾರ್ ನೇತೃತ್ವದಲ್ಲಿ 20ಕ್ಕೂ ಹೆಚ್ಚಿನ ವೈದ್ಯಕೀಯ ಸಿಬ್ಬಂದಿ ಆರೋಗ್ಯ ತಪಾಸಣೆಯಲ್ಲಿ ಭಾಗವಹಿಸಿದ್ದರು.
ಆನೆಗಳಿಗೆ ಉತ್ತಮ ಆತಿಥ್ಯ ನೀಡಲಾಗುತ್ತಿದ್ದು, ಅವುಗಳನ್ನು ನೋಡಿಕೊಳ್ಳುವ ಮಾವುತರು, ಕಾವಾಡಿಗಳು ಮತ್ತು ಅವರ ಕುಟುಂಬದವರ ಆರೋಗ್ಯದ ಬಗ್ಗೆಯೂ ಗಮನ ಹರಿಸಬೇಕಾಗಿದೆ. ಹೀಗಾಗಿ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿದೆ. 2ನೇ ತಂಡದಲ್ಲಿ ಅರಮನೆಗೆ ಆಗಮಿಸಲಿರುವ ಮಾವುತರು ಮತ್ತು ಕಾವಾಡಿಗಳಿಗೆ ಗಾಂಧಿ ಜಯಂತಿ ಅಂಗವಾಗಿ ಆರೋಗ್ಯ ತಪಾಸಣೆ ಆಯೋಜಿಸಲಾಗುವುದು ಎಂದು ಮೈಸೂರು ಕನ್ನಡ ವೇದಿಕೆಯ ಅಧ್ಯಕ್ಷ ಎಸ್. ಬಾಲಕೃಷ್ಣ ತಿಳಿಸಿದರು. ಕರ್ನಾಟಕ ಒಣಭೂಮಿ ಅಭಿವೃದ್ಧಿ ಮಂಡಳಿಯ ಮಾಜಿ ಅಧ್ಯಕ್ಷ ಕೆ.ಆರ್. ಮೋಹನ್ಕುಮಾರ್, ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ದೇವರಾಜ್, ಮೈಸೂರು ಕನ್ನಡ ವೇದಿಕೆಯ ಮುಖಂಡರಾದ ನಾಲಾಬೀದಿ ರವಿ, ಸುರೇಶ್ ಬಾಬು, ವೆಂಕಟೇಶ್, ಮುನಿರಾಜು, ಗೋಪಿ, ಕುಮಾರ್, ರಾಜು ಇದ್ದರು.