ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಯಕ್ಷಗಾನದಲ್ಲಿ ಪುರುಷರೇ ಏಕೆ ಸ್ತ್ರೀಪಾತ್ರ ಮಾಡ್ತಾರೆ?

Rashmi Kasaragodu
Updated On : 4 Sept 2013, 1:04 am


ಕ.ಪ್ರ.ವಾರ್ತೆ   ಮೈಸೂರು   ಸೆ. 3
ನಗರದ ಎಸ್ಬಿಆರ್ಆರ್ ಮಹಾಜನ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗ ಮತ್ತು ರಾಷ್ಟ್ರೀಯ ಸೇವಾ ಯೋಜನೆ ಘಟಕಗಳ ಆಶ್ರಯದಲ್ಲಿ ಯಕ್ಷಗಾನ ಸಂವಾದ ಕಾರ್ಯಕ್ರಮ ನಡೆಯಿತು.
ಎಂ. ಗೋವಿಂದಭಟ್ಟ ಹಾಗೂ ಇತರ ಯಕ್ಷಗಾನ ಕಲಾವಿದರು ವಿದ್ಯಾರ್ಥಿಗಳೊಡನೆ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಗೋಪಾಲ ಕೃಷ್ಣ ಭಟ್ಟರು ಮೂವತ್ತು ವರ್ಷಗಳಿಂದಲೂ ಮೈಸೂರಿಗೆ ಆಗಮಿಸಿ ಯಕ್ಷಗಾನ ಪ್ರದರ್ಶನ ನಡೆಸುತ್ತಿದ್ದಾರೆ. ನಿಡ್ಲೆ ಯಕ್ಷಗಾನ ಮಂಡಳಿಯದ್ದು ಈ ವರ್ಷ ನಗರದಲ್ಲಿ 31 ಪ್ರದರ್ಶನ ನಡೆಯುತ್ತಿದೆ. ದೇಶದ ಎಲ್ಲೆಡೆ ಪಾರ್ಥಿಸುಬ್ಬರು ಬರೆದ ಯಕ್ಷಗಾನ ಪ್ರಸಂಗ ಇದೆ ಎಂದರು.
ಎಂ. ಗೋವಿಂದಭಟ್ಟರು ಪ್ರಾಸ್ತಾವಿಕ ಮಾತುಗಳನಾಡಿ, ಮೈಸೂರಿನವರಾದ ನಂಜುಂಡ ಭಾಗವತರು ಯಕ್ಷಗಾನದ ಕತೆ ಬರೆದವರು, ಭಾರತೀಯ ಕಲೆಗಳಲ್ಲಿ ಒಂದಾದ ಯಕ್ಷಗಾನ ಕಲೆ ದಕ್ಷಿಣ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಪ್ರಚಲಿತ. ಹಿಂದೆ ರಾಮಾಯಣ ಮತ್ತು ಮಹಾಭಾರತ ಮುಂತಾದ ಪೌರಾಣಿಕ ಕಥೆಗಳ ಆಧರಿಸಿದ ಯಕ್ಷಗಾನ ಪ್ರದರ್ಶನ ರಾತ್ರಿಯೆಲ್ಲಾ ನಡೆಯುತಿತ್ತು. ಅಂದಿನ ಅವಿದ್ಯಾವಂತ ಜನಸಮುದಾಯಕ್ಕೆ ಮನರಂಜನೆ ಮಾತ್ರವಲ್ಲ, ಪೌರಾಣಿಕ ಕಥೆಗಳನ್ನು ಮನವರಿಕೆ ಮಾಡಿಕೊಡುವುದಾಗಿತ್ತು. ತಾಳ ಮದ್ದಲೆ, ಹರಿಕೆ ಆಟ, ಬಡಗುತಿಟ್ಟು, ದೊಡ್ಡಾಟ, ಮೂಡಲಪಾಯ, ತೆಂಕಲ ಆಟ ಮುಂತಾದ ಯಕ್ಷಗಾನ ಪ್ರದರ್ಶನಗಳಿವೆ. ಯಕ್ಷಗಾನ ಪ್ರದರ್ಶನದ ವಿಶಿಷ್ಟತೆ ಎಂದರೆ ಶುದ್ಧ ಕನ್ನಡ ಪ್ರಯೋಗ, ಒಂದು ಶಬ್ದವೂ ಬೇರೆಯದಿರುವುದಿಲ್ಲ. ಭಾಗವತರೇ ಸೂತ್ರಧಾರಿಗಳು ಎಂದರು.
ಪ್ರಥಮ ವರ್ಷದ ಕನ್ನಡ ಐಚ್ಛಿಕ ವಿದ್ಯಾರ್ಥಿನಿ ಅನಿತಾ, ಯಕ್ಷಗಾನದಲ್ಲಿ ಪುರುಷರೇ ಏಕೆ ಸ್ತ್ರೀ ಪಾತ್ರ ಮಾಡುತ್ತಾರೆ ಎಂದು ಕೇಳಿದಾಗ, ಇದೊಂದು ಗಂಡು ಕಲೆ, ಹಿಂದೆ ಊರಿಂದ ಊರಿಗೆ ಪ್ರಯಾಣಿಸಬೇಕಾದ ಸನ್ನಿವೇಶದಲ್ಲಿ ಸ್ತ್ರೀಯರು ಕೌಟುಂಬಿಕ ನಿರ್ವಹಣೆ ಮಾಡಬೇಕಾದ್ದರಿಂದ ಪುರುಷರೇ ಸ್ತ್ರೀ ಪಾತ್ರ ಮಾಡುತ್ತಿದ್ದರು. ಆದರೆ, ಈಗ ದೇಶ- ವಿದೇಶಗಳಲ್ಲಿ ಸ್ತ್ರೀಯರು ಅಭಿನಯಿಸುತ್ತಿದ್ದಾರೆ ಎಂದರು.
ಅಭಿಷೇಕ್ ನಾಯಕ್ ಎಂಬ ಯಕ್ಷಗಾನ ಕಲೆಯ ಪ್ರಾಚೀನತೆಯ ಬಗ್ಗೆ ಪ್ರಶ್ನಿಸಿದಾಗ, ಇದು ಹಿಂದಿನಿಂದಲೇ ಇತ್ತು, ದೇವತೆಗಳ ಹತ್ತಿರ ಯಕ್ಷರು ಇರುತ್ತಿದ್ದರು. ಭರತ ಮಹರ್ಷಿಗಳ ಕಥೆಯಲ್ಲಿ ಬ್ರಹ್ಮಲೋಕದಲ್ಲಿ ಪ್ರದರ್ಶನವಾಗುತ್ತಿತ್ತು ಎಂದರು. ಅನಿಲ್ಕುಮಾರ್ ಯಕ್ಷಗಾನ ಕಲೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಾತ್ರ ಯಾಕೆ ಹೆಚ್ಚು ಪ್ರಸಿದ್ಧಿಗೆ ಬಂದಿದೆ ಎಂದು ಕೇಳಿದಾಗ, ಅಲ್ಲಿ ಆ ಕಲೆಗೆ ಸಿಕ್ಕ ಪ್ರೋತ್ಸಾಹ ಕಾರಣ. ಜೊತೆಗೆ ಈ ಕಲೆಗೆ ಹೆಚ್ಚಾಗಿ ವಿದ್ಯಾವಂತರ ಪ್ರವೇಶ ಆಗಲಿಲ್ಲ. ಆದ್ದರಿಂದ ಯಕ್ಷಗಾನ ಪ್ರದರ್ಶನ ಕಲೆ ಎಲ್ಲ ಕಡೆಗಳಲ್ಲೂ ಮಹತ್ವ ಪಡೆದಿರಲು ಕಾರಣವಾಯಿತು ಎಂದರು.
ಕನ್ನಡ ವಿಭಾಗದ ಮುಖ್ಯಸ್ಥ ಡಾ.ಎಚ್.ಆರ್. ತಿಮ್ಮೇಗೌಡ ಸ್ವಾಗತಿಸಿದರು. ಕನ್ನಡ ವಿಭಾಗದ ಅಧ್ಯಾಪಕಿ ಬಿ.ಆರ್. ಜಯಕುಮಾರಿ, ಡಾ. ವಿನೋದಮ್ಮ, ಕೆ.ಎಮ್. ಮಹದೇವ, ಎಲ್.ಎಮ್. ಹೇಮಲತಾ, ರಾಷ್ಟ್ರೀಯ ಸೇವಾ ಯೋಜನೆಯ ಘಟಕದ ಅಧಿಕಾರಿ ರಮೇಶ್ ಇದ್ದರು. ಕನ್ನಡ ವಿಭಾಗದ ಪ್ರಥಮ, ದ್ವಿತೀಯ, ತೃತೀಯ ವರ್ಷದ ಕನ್ನಡ ಐಚ್ಛಿಕ ವಿದ್ಯಾರ್ಥಿಗಳು ಹಾಗೂ ಎನ್ಎಸ್ಎಸ್ ಶಿಬಿರಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು, ಅತ್ಯಂತ ಯಶಸ್ವಿಯಾಗಿ ಸಂವಾದ ಕಾರ್ಯಕ್ರಮ ನಡೆಯಿತು.


ಅಭಿಮಾನಿಗಳಿಂದ ಸುದೀಪ್ ಜನ್ಮದಿನ

ಎಚ್.ಡಿ. ಕೋಟೆ: ಸುದೀಪ್ ಅಭಿಮಾನಿಗಳ ಸಂಘದಿಂದ ಸೋಮವಾರ ನಟ ಸುದೀಪ್ ಅವರ 40ನೇ ವರ್ಷದ ಹುಟ್ಟುಹಬ್ಬವನ್ನು ಪಟ್ಟಣದ ವೆಂಕಟೇಶ್ವರ ಹೋಟೆಲ್ನಲ್ಲಿ ಆಚರಿಸಲಾಯಿತು. ಸಂಘದ ಅಧ್ಯಕ್ಷ ರವಿನಾಯಕ ಕೇಕ್ ಕತ್ತರಿಸಿ ಅಭಿಮಾನಿಗಳಿಗೆ ವಿತರಿಸಿದರು. ಪದಾಧಿಕಾರಿಗಳಾದ ಚಿಕ್ಕನಾಯಕ, ಲೋಕೇಶ್, ರಾಘು, ವಾಸು, ಸಿದ್ದ, ಆಶ್ವರ್, ಮನು, ಶಿವ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement