ರಘು ಆಚಾರ್ಗೆ ಅದ್ಧೂರಿ ಸ್ವಾಗತ
ಮೈಸೂರು: ಇತ್ತೀಚೆಗೆ ಚಿತ್ರದುರ್ಗ- ದಾವಣಗೆರೆ ಜಿಲ್ಲೆಗಳ ಸ್ಥಳೀಯ ಸಂಸ್ಥೆಯಿಂದ ವಿಧಾನ ಪರಿಷತ್ತಿಗೆ ನಡೆದ ಉಪಚುನಾವಣೆಯಲ್ಲಿ ಆಯ್ಕೆಯಾದ ನಂತರ ಮೊದಲ ಬಾರಿಗೆ ಮೈಸೂರಿಗೆ ಆಗಮಿಸಿದ ರಘು ಆಚಾರ್ ಅವರನ್ನು ಅಭಿಮಾನಿಗಳು, ಹಿತೈಷಿಗಳು, ವಿಶ್ವಕರ್ಮ ಸಮುದಾಯದವರು ಮಂಗಳವಾರ ಆತ್ಮೀಯವಾಗಿ ಸ್ವಾಗತಿಸಿದರು. ಬೆಂಗಳೂರು- ನೀಲಗಿರಿ ರಸ್ತೆ ಮುಖಾಂತರ ಮೈಸೂರಿಗೆ ಆಗಮಿಸಿದ ರಘು ಆಚಾರ್ ಅವರನ್ನು ನಗರದ ಟೋಲ್ಗೇಟ್ ಬಳಿ ಕಾರ್ಯಕರ್ತರು ಹಾರ- ತುರಾಯಿ ಹಾಕಿ, ಪಟಾಕಿ ಸಿಡಿಸಿ ಸ್ವಾಗತಿಸಿದರು. ಕಾರಿನಿಂದ ಇಳಿದು ಜನರತ್ತ ಕೈಬೀಸಿದ ಶಾಸಕರು ಅಭಿಮಾನದ ಹೊಳೆ ಮಿಂದು ಹೋದರು. ಇವರೊಂದಿಗೆ ಮಾಜಿ ಸಚಿವ ಗೂಳಿಹಟ್ಟಿ ಡಿ. ಶೇಖರ್, ಜಿಪಂ ಮಾಜಿ ಅಧ್ಯಕ್ಷ ಬಿ.ಎಂ. ರಾಮು ಜನರಿಂದ ಶುಭಾಶಯ ಸ್ವೀಕರಿಸಿದರು. ನಂತರ ರಘು ಆಚಾರ್ ಅವರು ಡಿ. ದೇವರಾಜ ಅರಸು ಅವರ ಸಮಾಧಿಗೆ ನಮನ ಸಲ್ಲಿಸಲು ಹುಣಸೂರಿನತ್ತ ಪ್ರಯಾಣ ಬೆಳೆಸಿದರು. ಇದೇ ವೇಳೆ ಕರ್ನಾಟಕ ರಾಜ್ಯ ವಿಶ್ವಕರ್ಮ ಮಹಾಸಭಾ ಜಿಲ್ಲಾಧ್ಯಕ್ಷ ಸಿ.ಟಿ. ಆಚಾರ್ಯ, ಮೈಸೂರು ಜಿಲ್ಲಾ ವಿಶ್ವಕರ್ಮ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳಾದ ಆನಂದೂರು ಪುಟ್ಟಸ್ವಾಮಾಚಾರ್, ಹೂಟಗಳ್ಳಿ ಗುರುಸ್ವಾಮಿ, ಹೆಬ್ಬಾಳು ರವಿಕುಮಾರ್, ಹುಯಿಲಾಳು ಕುಮಾರ್, ಕೂರ್ಗಳ್ಳಿ ಎಸ್. ನಾಗೇಶ್, ಉತ್ತನಹಳ್ಳಿ ಗೋವಿಂದರಾಜು ಇದ್ದರು.