ಕಲ್ಪವೃಕ್ಷ ಟ್ರಸ್ಟ್ನಿಂದ ಪೌಷ್ಟಿಕ ತೋಟ ಯೋಜನೆಗೆ ಚಾಲನೆ
ಕ.ಪ್ರ.ವಾರ್ತೆ ಮೈಸೂರು ಸೆ. 4
ನಗರದ ಕಲ್ಪವೃಕ್ಷ ಟ್ರಸ್ಟ್ ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಗಳನ್ನು ಗಮನದಲ್ಲಿಟ್ಟುಕೊಂಡು ಪೌಷ್ಟಿಕ ತೋಟ ಎಂಬ ವಿನೂತನ ಯೋಜನೆ ಪರಿಚಯಿಸುತ್ತಿದೆ.
ಗ್ರಾಮೀಣ ಪ್ರದೇಶದಲ್ಲಿನ ಮಕ್ಕಳು ಅಪೌಷ್ಟಿಕತೆಯಿಂದ ನರಳುತ್ತಿದ್ದಾರೆ. ಆದ್ದರಿಂದ ನಗರದ ಸುತ್ತಮುತ್ತಲ ಹಳ್ಳಿಯಲ್ಲಿನ ಸರ್ಕಾರಿ ಶಾಲೆಗಳಲ್ಲಿ ಕೈತೋಟ ಮಾಡಲು ಸಾಧ್ಯವಿರುವಲ್ಲಿ, ಆಸಕ್ತ ಶಿಕ್ಷಕರು ತೋಟ ಆರಂಭಿಸಲು ಬೇಕಾದ ಬೀಜ, ಸಸಿ, ಗುದ್ದಲಿ, ನೀರುಣಿಸುವ ಕ್ಯಾನ್ ಮತ್ತಿತರ ಪರಿಕರ ನೀಡುವ ಜೊತೆಗೆ ಗಿಡಗಳನ್ನು ಕ್ರಮಬದ್ಧವಾಗಿ ಬೆಳೆಯಲು ತರಬೇತಿ ಸಹ ನೀಡಲು ಮುಂದಾಗಿದೆ ಎಂದು ಟ್ರಸ್ಟ್ನ ಸಂಚಾಲಕ ಕಾರ್ಯದರ್ಶಿ ರಘುರಾಮ್ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ರೈತರಿಗೆ ಬೇಕಾದ ಕೃಷಿ ಮಾಹಿತಿ ಮತ್ತು ತರಬೇತಿ ನೀಡಿ, ಅವರನ್ನು ಸ್ವಾವಲಂಬಿಯಾಗಿ ಸ್ವಾಭಿಮಾನದಿಂದ ಬದುಕಲು ನೆರವಾಗುವುದು, ಆರೋಗ್ಯ ಶಿಬಿರ ಏರ್ಪಡಿಸಿ, ಗ್ರಾಮೀಣ ಜನರ ಆರೋಗ್ಯ ವೃದ್ಧಿಗೆ ಸಹಕರಿಸುವುದು, ಶಿಕ್ಷಣ ಮತ್ತು ಸಾಹಿತ್ಯ ಸಂಬಂಧಿತ ಕಾರ್ಯಕ್ರಮಗಳ ಮೂಲಕ ಶಿಕ್ಷಕರಿಗೆ ಮತ್ತು ಗ್ರಾಮಸ್ಥರಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡಲು ಪ್ರೇರೇಪಿಸುವ ಗುರಿಯನ್ನು ಟ್ರಸ್ಟ್ ಹೊಂದಿದೆ ಎಂದರು.
ಸಂಸ್ಥೆಯು ಪ್ರಸಕ್ತ ವರ್ಷ ಸುಮಾರು 50 ರಿಂದ 100 ಶಾಲೆಗಳಿಗೆ ಈ ಕಾರ್ಯಕ್ರಮ ವಿಸ್ತರಿಸುವ ಗುರಿ ಹೊಂದಿದೆ. ಆಸಕ್ತ ಶಾಲಾ ಶಿಕ್ಷಕರು ಎ.ಜಿ. ದೇವರಾಜ್, ಆಡಳಿತಾಧಿಕಾರಿ, ಕಲ್ಪವೃಕ್ಷ ಟ್ರಸ್ಟ್, ಕಾವ್ಯಲೋಕ, ನಂ. 963,1, ಕಾಂತರಾಜ ರಸ್ತೆ, ಲಕ್ಷ್ಮೀಪುರಂ, ಮೈಸೂರು- 04 ಅಥವಾ ಮೊ. 9164837773 ಸಂಪರ್ಕಿಸಬಹುದು. ಸಸಿಗಳನ್ನು ಉಚಿತವಾಗಿ ವಿತರಿಸಲಾಗುವುದು ಎಂದು ತಿಳಿಸಿದರು.
ಟ್ರಸ್ಟ್ನ ಅಧ್ಯಕ್ಷ ಡಾ.ಎಚ್.ಬಿ. ರಾಜಶೇಖರ್, ಪ್ರಧಾನ ಕಾರ್ಯದರ್ಶಿ ಕೃಷಿ ವಿಜ್ಞಾನಿ ಡಾ. ವಸಂತಕುಮಾರ್ ತಿಮಕಾಪುರ, ಖಜಾಂಚಿ ಪ್ರಶಾಂತ್ ಇದ್ದರು.