ಚಿರತೆ ದಾಳಿಗೆ ಮೇಕೆ ಬಲಿ
ಕ.ಪ್ರ.ವಾರ್ತೆ ಪಿರಿಯಾಪಟ್ಟಣ ಸೆ. 4
ಮನೆಯ ಹಿಂಬದಿಯ ಕೊಟ್ಟಿಗೆಯಲ್ಲಿ ಕಟ್ಟಲಾಗಿದ್ದ ಮೇಕೆಯನ್ನು ಚಿರತೆಯು ಕೊಂದಿರುವ ಘಟನೆ ತಾಲೂಕಿನ ತಿರುಮಲಾಪುರ ಗ್ರಾಮದಲ್ಲಿ ಮಂಗಳವಾರ ರಾತ್ರಿ ಜರುಗಿದೆ.
ಗ್ರಾಮದ ನಂಜಶೆಟ್ಟಿ ಎಂಬವರು ಗ್ರಾಮದ ಹೊರಗಿನ ತಮ್ಮ ಜಮೀನಿನಲ್ಲಿ ಮನೆಯ ಹಿಂಬದಿಯ ಕೊಟ್ಟಿಗೆಯಲ್ಲಿ ಮೇಕೆಯನ್ನು ಕಟ್ಟಿದ್ದು, ಮಂಗಳವಾರ ರಾತ್ರಿ ಚಿರತೆಯೊಂದು ಕೊಟ್ಟಿಗೆಗೆ ಬಂದು ಮೇಕೆಯ ಮೇಲೆ ದಾಳಿ ನಡಿಸಿ ಎಳೆದೊಯ್ಯಲು ಪ್ರಯತ್ನಿಸಿದೆ. ಈ ವೇಳೆ ಮೇಕೆಯ ಕಿರುಚಾಟ ಕೇಳಿದ ಮನೆಯ ಮಾಲೀಕ ಶಬ್ದ ಮಾಡಿದ್ದರಿಂದ ಚಿರತೆ ಮೇಕೆಯನ್ನು ಸ್ಥಳದಲ್ಲಿಯೇ ಬಿಟ್ಟು ಓಡಿಹೊಗಿದೆ. ಚಿರತೆ ಮೇಕೆಯ ಕುತ್ತಿಗೆಯ ಭಾಗವನ್ನು ಬಲವಾಗಿ ಕಚ್ಚಿರುವುದರಿಂದ ಮೇಕೆ ಮೃತಪಟ್ಟಿದೆ.
ಗ್ರಾಮಸ್ಥರಲ್ಲಿ ಆತಂಕ: ಕೆಲವು ದಿನಗಳಿಂದ ಗ್ರಾಮದ ಸುತ್ತಮುತ್ತ ಚಿರತೆಯ ಹಾವಳಿ ಹೆಚ್ಚಿದ್ದು, ಮೇಕೆ, ಕುರಿ, ಕರು ಸೇರಿದಂತೆ ನಾಯಿಗಳನ್ನು ಚಿರತೆ ಎಳೆದೊಯ್ಯುತ್ತಿದ್ದು, ರಾತ್ರಿ ವೇಳೆ ಗ್ರಾಮಸ್ಥರು ಮನೆಯಿಂದ ಹೊರಗೆ ಬರಲು ಆತಂಕಪಡುತ್ತಿದ್ದಾರೆ.
ತಿರುಮಲಾಪುರ ಗ್ರಾಮದ ಸುತ್ತಮುತ್ತ ಕೆಲವು ತಿಂಗಳ ಹಿಂದೆ ಚಿರತೆ ಪ್ರತ್ಯಕ್ಷವಾಗುತ್ತಿರುವ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ಬಂದ ವೇಳೆ, ಚಿರತೆಯನ್ನು ಹಿಡಿಯಲು ಬೋನ್ ಇಡಲಾಗಿತ್ತು. ಆದರೆ, ಚಿರತೆ ಬೋನಿಗೆ ಬಿದ್ದಿರಲಿಲ್ಲ. ಹಾಗಾಗಿ ಬೋನನ್ನು ತೆಗೆಯಲಾಗಿತ್ತು. ಪ್ರಸ್ತುತ ಚಿರತೆಯ ಹಾವಳಿ ಮರುಕಳಿಸಿರುವುದರಿಂದ ಮತ್ತೆ ಬೋನ್ ಇಡುವ ಮೂಲಕ ಚಿರತೆಯನ್ನು ಹಿಡಿಯಲು ಪ್ರಯತ್ನಿಸುವುದಾಗಿ ವಲಯ ಅರಣ್ಯಾಧಿಕಾರಿ ಎಂ.ಎಸ್. ಚಿಣ್ಣಪ್ಪ ತಿಳಿಸಿದ್ದಾರೆ.