ಚುನಾವಣೆ: ನಂಜೇಗೌಡರ ಬಣ ಮೇಲುಗೈ
ಕ.ಪ್ರ.ವಾರ್ತೆ ಎಚ್.ಡಿ.ಕೋಟೆ ಸೆ. 4
ಕುತೂಹಲ ಕೆರಳಿಸಿದ್ದ ಮಾದಾಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರ ಚುನಾವಣೆಯಲ್ಲಿ ಮಾಜಿ ಅಧ್ಯಕ್ಷ ನಂಜೇಗೌಡರ ಬಣಕ್ಕೆ ಭರ್ಜರಿ ಜಯ ಲಭಿಸಿದೆ.
ನಂಜೇಗೌಡ ಬಣದ ಪ್ರತಿಸ್ಪರ್ಧಿ ಮಂಜುನಾಥ್ ಬಣಕ್ಕೆ ಭಾರಿ ಮುಖಭಂಗವಾಗಿದೆ. ಐದು ವರ್ಷಗಳ ಅವಧಿಯ ಸಂಘದ 10 ನಿರ್ದೇಶಕರ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಒಟ್ಟು 19 ಜನ ಸ್ಪರ್ಧಿಸಿದ್ದು, ಅದರಲ್ಲಿ ನಂಜೇಗೌಡ ಸೇರಿದಂತೆ ಅವರ ಬಣದ ಕೆಂಡಪ್ಪ, ಲೋಕೇಶ್, ಕೃಷ್ಣಮಾದೇಗೌಡ, ವಿಜಯ್ಕುಮಾರ್, ಮಾದಯ್ಯ, ವರಸಿಂಗೇಗೌಡ, ಕುಮಾರಸ್ವಾಮಿ ಜಯ ಗಳಿಸಿದ್ದಾರೆ. ನಂಜೇಗೌಡ ಅವರು 7ನೇ ಬಾರಿ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ. ಚುನಾವಣಾಧಿಕಾರಿ ಪ್ರೇಮಾವತಿ, ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮೋಹನ್ ಕಾರ್ಯನಿರ್ವಹಿಸಿದರು.