ವೃತ್ತಿಪರ ಪದವೀಧರರಿಂದ ಕೊಡುಗೆ ಇಲ್ಲ: ರಾವ್ ವಿಷಾದ
ಕ.ಪ್ರ.ವಾರ್ತೆ ಮೈಸೂರು ಸೆ. 4
ಪ್ರಸ್ತುತ ಶಿಕ್ಷಣ ವ್ಯವಸ್ಥೆಯಲ್ಲಿ ಬಹುತೇಕ ಮಂದಿ ವೃತ್ತಿಪರ ಕೋರ್ಸಿಗೆ ದಾಖಲಾಗಿ ಪದವಿ ಪಡೆಯುತ್ತಿದ್ದಾರೆ. ಅಂತಹ ವಿದ್ಯಾರ್ಥಿಗಳಿಂದ ನಮ್ಮ ದೇಶದ ಮಾನವ ಸಂಪನ್ಮೂಲಕ್ಕೆ ಉತ್ತಮ ಕೊಡುಗೆ ಲಭಿಸುತ್ತಿಲ್ಲ ಎಂದು ಪ್ರಾದೇಶಿಕ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲ ಪ್ರೊ. ಡಿ.ಜಿ. ರಾವ್ ವಿಷಾದಿಸಿದರು.
ಪ್ರಾದೇಶಿಕ ಶಿಕ್ಷಣ ಸಂಸ್ಥೆಯಿಂದ ನಗರದ ಕೌಟಿಲ್ಯ ವಿದ್ಯಾಲಯದಲ್ಲಿ ಆಯೋಜಿಸಿದ್ದ ಒಂದು ದಿನದ ಕೆರಿಯರ್ ಡೇ ಮತ್ತು ಕೆರಿಯರ್ ಎಗ್ಸಿಬಿಷನ್- 2013 ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ, ಸರ್ಕಾರವೂ ವೃತ್ತಿಪರ ಉನ್ನತ ಶಿಕ್ಷಣಕ್ಕೆ ಒತ್ತು ನೀಡುತ್ತಿದ್ದು, ಇಂತಹ ಉತ್ತೇಜನವನ್ನು ನಮ್ಮೆಲ್ಲರ ಅಮೂಲಾಗ್ರ ವ್ಯಕ್ತಿತ್ವ ರೂಪಿಸುವ, ಇನ್ನಿತರ ಕೌಶಲ್ಯಪೂರ್ಣ ಶಿಕ್ಷಣಕ್ಕೂ ನೀಡಬೇಕು ಎಂದು ಅಪೇಕ್ಷಿಸಿದರು.
ಈ ನಿಟ್ಟಿನಲ್ಲಿ ಪೋಷಕರ ಪಾತ್ರ ಮಹತ್ತರವಾದುದಾಗಿದ್ದು, ತಮ್ಮ ಮಕ್ಕಳು ಅವರವರ ಆಸಕ್ತಿದಾಯಕ ಕ್ಷೇತ್ರಗಳಲ್ಲಿ ಸ್ವಯಂಪ್ರೇರಿತರಾಗಿ ಅಭಿವೃದ್ಧಿ ಹೊಂದಲು ಪ್ರೋತ್ಸಾಹಿಸಬೇಕೇ ಹೊರತು ತಮ್ಮದೇ ಇಷ್ಟಾನುಸಾರ ಕಲಿಯಬೇಕೆಂಬ ಒತ್ತಡ ಹೇರಬಾರದು. ಪೋಷಕರ ಇಂತಹ ದೃಷ್ಟಿಕೋನದಿಂದಾಗಿಯೇ ನಮ್ಮ ದೇಶದಲ್ಲಿ ಪ್ರತಿಭಾ ಪಲಾಯನವಾಗುತ್ತಿದ್ದು, ದೇಶಕ್ಕೆ ನಷ್ಟವುಂಟಾಗುತ್ತಿದೆ ಎಂದರು.
ನಿವೃತ್ತ ಐಪಿಎಸ್ ಅಧಿಕಾರಿ ಸಿ. ಚಂದ್ರಶೇಖರ್ ಕಾರ್ಯಕ್ರಮ ಉದ್ಘಾಟಿಸಿದರು. ಕೌಟಿಲ್ಯ ವಿದ್ಯಾಲಯದ ಪ್ರಾಂಶುಪಾಲೆ ಡಾ.ಎಲ್. ಸವಿತಾ, ಕಾರ್ಯಕ್ರಮ ಸಂಚಾಲಕ ಪ್ರೊ. ಸಿ.ಜಿ. ವೆಂಕಟೇಶ್ಮೂರ್ತಿ ಇದ್ದರು.
ಸ್ಪರ್ಧೆಯ ವಿಜೇತರು: ಕೆರಿಯರ್ ಸಂಬಂಧಿತ ಹಲವಾರು ಸ್ಪರ್ಧೆ ಆಯೋಜಿಸಲಾಗಿತ್ತು. ಅವುಗಳಲ್ಲಿ ಕೌಟಿಲ್ಯ ವಿದ್ಯಾಲಯದ ವಿದ್ಯಾರ್ಥಿಗಳಿಗಾಗಿ ಮಾತ್ರ ಆಯೋಜಿಸಿದ್ದ ಫ್ಯಾನ್ಸಿ ಡ್ರೆಸ್ ಸ್ಪರ್ಧೆಯ 1ನೇ ಗುಂಪಿನಲ್ಲಿ 2ನೇ ತರಗತಿಯ ಚಿರಾಗ್ ವಿ. ಅರಸ್ ಮತ್ತು ಸಮೀಕ್ಷ ಶರತ್ ಕ್ರಮವಾಗಿ ಪ್ರಥಮ ಹಾಗೂ ದ್ವಿತೀಯ ಸ್ಥಾನವನ್ನು, 2ನೇ ಗುಂಪಿನಲ್ಲಿ 3ನೇ ತರಗತಿಯ ನಯೋನಿಕ ಮತ್ತು ಜಾಹ್ನವಿ ಚೇತನ್ ಕ್ರಮವಾಗಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಗಳಿಸಿದರು. ರಸಪ್ರಶ್ನೆ ಸ್ಪರ್ಧೆಯಲ್ಲಿ ಕೌಟಿಲ್ಯ ವಿದ್ಯಾಲಯದ ಪ್ರಮಥ ಮತ್ತು ಹೃತಿಕ್ ಪ್ರಥಮ ಸ್ಥಾನವನ್ನು, ಅಂಕುಶ್ ಮತ್ತು ಗುರುರಾಜ್ ದ್ವಿತೀಯ ಸ್ಥಾನ ಪಡೆದರು.
ತದನಂತರ ನಡೆದ ಸ್ಥಳದಲ್ಲೇ ಚಿತ್ರ ಬಿಡಿಸುವ ಸ್ಪರ್ಧೆಯಲ್ಲಿ ಕೌಟಿಲ್ಯ ವಿದ್ಯಾಲಯದ ದಕ್ಷತ್ ಪ್ರಥಮ ಹಾಗೂ ಭುವನ್ ದ್ವಿತೀಯ ಸ್ಥಾನ ಪಡೆದರು. ಆಶು ಅಭಿನಯ ಸ್ಪರ್ಧೆಯಲ್ಲಿ ರಾಹುಲ್ ಬಾಲಾಜಿ, ವೈಷ್ಣವಿ ಮತ್ತು ಪ್ರಮಥ ಕ್ರಮವಾಗಿ ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದರು.