' ಮೊರಾರ್ಜಿ ಶಾಲೆಯಿಂದ ಉತ್ತಮ ಸಾಧನೆ'
ಕ.ಪ್ರ.ವಾರ್ತೆ ಭೇರ್ಯ ಸೆ. 5
ರಾಜ್ಯದ 34 ಮೊರಾರ್ಜಿ ದೇಸಾಯಿ ವಸತಿ ಶಾಲೆಗಳ ಪೈಕಿ ನಮ್ಮ ಮೊರಾರ್ಜಿ ದೇಸಾಯಿ ವಸತಿ ಶಾಲೆ ಶೈಕ್ಷಣಿಕವಾಗಿ ಉತ್ತಮ ಸಾಧನೆ ಮಾಡಿದೆ ಎಂದು ಶಾಲೆಯ ಪ್ರಾಂಶುಪಾಲ ಪ್ರಸನ್ನಕುಮಾರ್ ಹೇಳಿದರು.
ಭೇರ್ಯ ಸಮೀಪದ ಅರಕೆರೆಯ ಮೊರಾರ್ಜಿ ದೇಸಾಯಿ ವಸತಿ ಶಾಲಾ ಆವರಣದಲ್ಲಿ ಪೋಷಕರು ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಗುರುವಂದನೆ ಸ್ವೀಕರಿಸಿ ಮಾತನಾಡಿದ ಅವರು, ಪೋಷಕರೆ ಸ್ವಯಂ ಪ್ರೇರಿತರಾಗಿ ಶಿಕ್ಷಕರ ದಿನ ಆಚರಿಸುತ್ತಿರುವುದು ಶ್ಲಾಘನೀಯ ಎಂದರು.
ಕಳೆದ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ.100 ರಷ್ಟು ಫಲಿತಾಂಶ ಬಂದಿದ್ದು ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ. ಶೈಕ್ಷಣಿಕವಾಗಿ ರಾಜ್ಯಕ್ಕೆ ಪ್ರಥಮ ಸ್ಥಾನ ದೊರೆಯಲು ಪೋಷಕರು ಹಾಗೂ ಶಿಕ್ಷಕರೇ ಕಾರಣ. ಆದ್ದರಿಂದ ಪೋಷಕರ ಮುಂದೆಯೂ ಸಹ ಶಾಲೆಯೊಂದಿಗೆ ಒಡನಾಟ ಇಟ್ಟುಕೊಂಡು ಶಾಲೆಯ ಸರ್ವತೋಮುಖ ಅಭಿವೃದ್ಧಿ ಕಾರಣಕರ್ತರಾಗುವಂತೆ ಅವರು ಕೋರಿದರು.
ಪೋಷಕರ ಪರವಾಗಿ ಮಾತನಾಡಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಜಶೇಖರ್, ಒಬ್ಬ ವಿದ್ಯಾರ್ಥಿಯನ್ನು ತಿದ್ದಿ ತೀಡಿ ಭವಿಷ್ಯ ರೂಪಿಸುವುದು ಗುರು ಒಬ್ಬರಿಗೆ ಸಾಧ್ಯ. ಶಿಕ್ಷಕರ ಜವಬ್ದಾರಿ ಪ್ರತಿ ದಿನ ಹೆಚ್ಚಾಗುತ್ತಿದ್ದು, ವಿದ್ಯಾರ್ಥಿಗಳೇ ಶಿಕ್ಷಕರನ್ನು ಪ್ರಶ್ನಿಸುವ ಸಮಯ ಬಂದಿದೆ ಎಂದು ಅಭಿಪ್ರಾಯಪಟ್ಟರು. ಇದೇ ವೇಳೆ ವಸತಿ ಶಾಲೆಯ 11 ಮಂದಿ ಶಿಕ್ಷಕರನ್ನು ಸಾಮೂಹಿಕವಾಗಿ ಗುರುವಂದನೆ ಸಲ್ಲಿಸಿ ನೆನಪಿನ ಕಾಣಿಕೆ ನೀಡಿ ಅಭಿನಂಧಿಸಲಯಿತು.
ಗ್ರಾಪಂ ಮಾಜಿ ಅಧ್ಯಕ್ಷ ಬಿ.ಎಚ್. ಮಹದೇವು, ಪೋಷಕರಾದ ರಘುನಾಥ್, ಶಿವಪ್ಪ, ನಾಗರಾಜ್, ಮಂಜುಳಾ, ಪತ್ರಕರ್ತ ಭೇರ್ಯ ಮಹೇಶ್, ಸಿಸಿ ಮಹದೇವು, ಕಾಂಗ್ರೆಸ್ ಮುಖಂಡ ಗಿಡ್ಡುಕುಮಾರ್, ವಸತಿ ಶಾಲಾ ಶಿಕ್ಷಕರಾದ ಹೇಮಂತ್, ಅಮಿತ್, ಶ್ರುತಿ ಇದ್ದರು.