ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಅಂಬಾರಿ ಕಟ್ಟುವುದರಲ್ಲಿಯೂ ಧರ್ಮ ರಾಜಕಾರಣ!

Rashmi Kasaragodu
Updated On : 6 Sept 2013, 12:00 pm

ಕ.ಪ್ರ.ವಾರ್ತೆ  ಮೈಸೂರು  ಸೆ. 5
ಜಂಬೂ ಸವಾರಿಯಂದು ಅರಣ್ಯ ಇಲಾಖೆಯ ಸಿಬ್ಬಂದಿ ಅಕ್ರಂ ಪಾಷ ಅಂಬಾರಿ ಕಟ್ಟುವುದು ಬೇಡವೆಂದು ಮೈಸೂರು ಕನ್ನಡ ವೇದಿಕೆ ಸೇರಿದಂತೆ ಕೆಲವು ಸಂಘಟನೆಯವರು ಮುಖ್ಯಮಂತ್ರಿಯವರಿಗೆ ಪತ್ರ ಬರೆದಿರುವುದು ಈಗ ವಿವಾದಕ್ಕೆ ಕಾರಣವಾಗಿದೆ.
ದಸರಾ ಆನೆಗಳು ನಗರಕ್ಕೆ ಆಗಮಿಸಿ ವಾಪಸ್ ಕಾಡಿಗೆ ಹೋಗುವವರೆಗೂ ಅಕ್ರಂ ಪಾಷ ಅವರು ಮಾವುತರು, ಕಾವಾಡಿಗಳ ಜತೆಗಿದ್ದು ಆನೆಗಳನ್ನು ನೋಡಿಕೊಳ್ಳುತ್ತಿದ್ದರು. ಅಂಬಾರಿ ಕಟ್ಟುವ ಕಾರ್ಯದಲ್ಲಿ ಪಾಲ್ಗೊಳ್ಳುತ್ತಿದ್ದರು.ಮಾವುತರು, ಕಾವಾಡಿಗಳು ಅಂಬಾರಿ ಕಟ್ಟಲಿ. ಅಕ್ರಂ ಪಾಷ ಅಂಬಾರಿ ಕಟ್ಟುವುದು ಬೇಡ ಎಂದು ಕೆಲವರು ಆಕ್ಷೇಪ ವ್ಯಕ್ತಪಡಿಸಿ ಪತ್ರ ಬರೆದಿದ್ದಾರೆ. ಈ ದೂರನ್ನು ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಕಚೇರಿಯಿಂದ ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳಿಗೆ ಸೂಚಿಸಲಾಗಿದೆ.ಹೀಗಾಗಿ ಅಕ್ರಂ ಪಾಷ ಅವರನ್ನು ಅಂಬಾರಿ ಕಟ್ಟುವ ದಿನ ಬೇರೆ ಕರ್ತವ್ಯಕ್ಕೆ ನಿಯೋಜಿಸುವುದಾಗಿ ಸ್ಥಳೀಯ ಅರಣ್ಯಾಧಿಕಾರಿ ಪತ್ರ ಬರೆದಿದ್ದಾರೆ. ಈ ನಡುವೆ ಸಂಘಟನೆಯವರು ನೀಡಿರುವ ದೂರು ವಾಪಸ್ ಪಡೆದಿದ್ದಾರೆ ಎಂದು ತಿಳಿದು ಬಂದಿದೆ. ಅಕ್ರಂ ಪಾಷ ಸೇವೆಗೆ ನಿಯೋಜಿಸುವ ಸಂಬಂಧ ಅಂತಿಮ ನಿರ್ಧಾರವನ್ನು ಜಿಲ್ಲಾಧಿಕಾರಿ ಕೈಗೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ.
ಆನೆ ಹಿಡಿಯಲು ಪ್ರಮುಖ ಪಾತ್ರ: ಕೆಲವು ವರ್ಷಗಳ ಹಿಂದೆ ಕಾಡಾನೆಯೊಂದು ನಗರದೊಳಗೆ ನುಗ್ಗಿ ದಾಂದಲೆ ನಡೆಸಿ, ಒಬ್ಬ ವ್ಯಕ್ತಿಯನ್ನು ಬಲಿ ತೆಗೆದುಕೊಂಡಿತ್ತು. ರೊಚ್ಚಿಗೆದ್ದಿದ್ದ ಆ ಕಾಡಾನೆಗೆ ಅರವಳಿಕೆ ಚುಚ್ಚು ಮದ್ದನ್ನು ನೀಡುವ ಕಾರ್ಯಾಚರಣೆಯಲ್ಲಿ ಅಕ್ರಂ ಪಾಷ ಅವರೇ ಪ್ರಮುಖ ಪಾತ್ರ ವಹಿಸಿದ್ದರು.
ಆನೆಗಳ ಆರೈಕೆ ಮಾಡುತ್ತಿರುವ ತನ್ನ ಮೇಲೆ ಕೆಲವು ಆರೋಪ ಹೊರಿಸಿ, ಅಂಬಾರಿ ಕಟ್ಟುವ ಕೆಲಸದಿಂದ ದೂರ ಇರಿಸುವ ನಿರ್ಧಾರಗಳಿಂದ ಅಕ್ರಂ ಪಾಷ ಮನನೊಂದಿದ್ದು, ಸುದೀರ್ಘ ರಜೆ ಹಾಕಲು ಮುಂದಾಗಿರುವುದಾಗಿ ತಿಳಿದು ಬಂದಿದೆ.
ಅರಮನೆಯೊಳಗೆ ತಾಲೀಮು: ದಸರಾ ಆನೆಗಳು ಗುರುವಾರ ಅಮಾವಾಸ್ಯೆ ಹಿನ್ನೆಲೆಯಲ್ಲಿ ಅರಮನೆ ಆವರಣದಲ್ಲಿ ತಾಲೀಮು ನಡೆಸಿದವು.
ಅಂಬಾರಿ ಆನೆ ಅರ್ಜುನ, ಬಲರಾಮ, ಗಜೇಂದ್ರ, ಅಭಿಮನ್ಯು, ವರಲಕ್ಷ್ಮಿ ಮತ್ತು ಸರಳ ಆನೆಗಳು ಬೆಳಗ್ಗೆ ಮತ್ತು ಸಂಜೆ ಅರಮನೆ ಆವರಣದಲ್ಲಿ ತಾಲೀಮು ನಡೆಸಿದವು. ಶುಕ್ರವಾರದಿಂದ (ಸೆ.6) ಆನೆಗಳ ಮೇಲೆ ಬಾರ ಹಾಕಿ ತಾಲೀಮು ಆರಂಭಿಸುವುದಾಗಿ ಎಂದು ಆನೆ ವೈದ್ಯ ಡಾ. ನಾಗರಾಜ್ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement