ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಆಯ್ಕೆ ವೇಳೆ ಪರಸ್ಪರ ಕಾಲೆಳೆದರು... ಗೊಂದಲ ಮೂಡಿಸಿದರು...

Rashmi Kasaragodu
Updated On : 5 Sept 2013, 11:57 am

ಕ.ಪ್ರ.ವಾರ್ತೆ  ಮೈಸೂರು  ಸೆ. 5
ನಗರ ಪಾಲಿಕೆಯಲ್ಲಿ ಗುರುವಾರ ನಡೆದ ಮೇಯರ್ ಮತ್ತು ಉಪ ಮೇಯರ್ ಆಯ್ಕೆ ಪ್ರಕ್ರಿಯೆಯಲ್ಲಿ ಹಲವು ಗೊಂದಲ, ಟೀಕೆ, ಕೀಟಲೆಗಳು ಕಂಡುಬಂದವು.
ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಮುಗಿಯುತ್ತಿದ್ದಂತೆಯೆ ಬಿಜೆಪಿಯ ನಂದೀಶ್ ಪ್ರೀತಂ ಗಲಾಟೆ ಆರಂಭಿಸಿದರು. ಪಾಲಿಕೆ ಸದಸ್ಯ, ಕೆಜೆಪಿಯ ಬಿ.ಎಲ್. ಭೈರಪ್ಪ ಅವರಿಗೆ ಹಣಕಾಸು ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನ ನೀಡುವುದಾಗಿ ಭರವಸೆ ನೀಡಿದ ಬಿಜೆಪಿ ಮುಖಂಡರು ಈಗ ವಂಚಿಸಿದ್ದಾರೆ. ಇದೊಂದು ಅವಕಾಶವಾದಿ ರಾಜಕಾರಣ ಎಂದು ಟೀಕಿಸಿದರು.
ಪಾಲಿಕೆಯ ಮೊದಲ ಮಹಡಿ ಪ್ರಾಂಗಣದಲ್ಲಿ ಬಿಜೆಪಿ ಮುಖಂಡರು ಮತ್ತು ಪಾಲಿಕೆ ಸದಸ್ಯರ ವಿರುದ್ಧ ಕೂಗಾಡಿದ ನಂದೀಶ್ ಪ್ರೀತಂ, ಇಲ್ಲಿ ಎಲ್ಲರೂ ಹರಕೆಯ ಕುರಿಗಳೆ. ನೀವೂ ಅಷ್ಟೆ ಎಂದು ಬಿ.ಎಲ್. ಭೈರಪ್ಪ ಅವರನ್ನೂ ಮೂದಲಿಸಿದರು. ಈ ಬಗ್ಗೆ ಪ್ರತಿಕ್ರಿಯಿಸಿದ ನಗರ ಬಿಜೆಪಿ ಪ್ರಧಾನ ಕಾರ್ಯದರ್ಶಿ ಯಶಸ್ವಿನಿ ಸೋಮಶೇಖರ್, ಬಿಜೆಪಿ ಮತ್ತು ಕೆಜೆಪಿ ಮುಖಂಡರು ಮಾತುಕತೆ ನಡೆಸಿದ ಫಲವಾಗಿ ಭೈರಪ್ಪ ಅವರು ಬಿಜೆಪಿ ಬೆಂಬಲಿಸಿದ್ದಾರೆ. ಮುಂದಿನ ದಿನಗಳಲ್ಲಿ ಉತ್ತಮ ಸ್ಥಾನ ನೀಡುವುದಾಗಿ ಮಾಜಿ ಸಚಿವ ಸಿ.ಟಿ. ರವಿ ಅವರು ಭೈರಪ್ಪ ಅವರೊಡನೆ ಮಾತುಕತೆ ನಡೆಸಿದ್ದರಿಂದ ಹಣಕಾಸು ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನ ಬಿಟ್ಟುಕೊಡಲಾಗಿದೆ ಎಂದರು. ಆದರೆ ಹಣಕಾಸು ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನವನ್ನು ಎಂ.ಕೆ. ಶಂಕರ್‌ಗೆ ನೀಡಲು ಪಕ್ಷ ತೀರ್ಮಾನಿಸಿದೆ ಎಂದು ತಿಳಿದುಬಂದಿದೆ.
ರಂಗಾದ ಸ್ನೇಕ್ ಶ್ಯಾಂ: ಉರಗ ತಜ್ಞ ಸ್ನೇಕ್ ಶ್ಯಾಂ ನಗರ ಪಾಲಿಕೆಯಲ್ಲಿ ಪ್ರಮಾಣ ವಚನ ಸ್ವೀಕರಿಸಲು ಸಾರೋಟ್‌ನಲ್ಲಿ ಆಗಮಿಸಿ ಎಲ್ಲರ ಆಕರ್ಷಣೆಗೆ ಪಾತ್ರರಾದರು. ಒಡೆಯರ್ ಮಾದರಿಯ ಮೀಸೆ, ಸಿಂಹಾದ್ರಿಯಸಿಂಹ ಚಲನಚಿತ್ರದಲ್ಲಿನ ವಿಷ್ಣುವರ್ಧನ್ ಮಾದರಿಯಲ್ಲಿ ಮೈಸೂರು ಪೇಟ, ಜುಬ್ಬ, ಶಲ್ಯ ಮತ್ತು ಕಚ್ಚೆ ಧರಿಸಿದ್ದರು. ಕೆಲವರು ಒಡೆಯರ್‌ಗೂ, ಮತ್ತೆ ಕೆಲವರು ವಿಷ್ಣುವರ್ಧನ್‌ಗೆ, ಮತ್ತೆ ಕೆಲವರು ಗುರುವಾರ ಶಿಕ್ಷಕರ ದಿನಾಚರಣೆಯಾದ್ದರಿಂದ ರಾಧಾಕೃಷ್ಣನ್‌ಗೂ ಹೋಲಿಸಿದರು.
ಮೇಯರ್ ಮತ್ತು ಉಪ ಮೇಯರ್ ಆಯ್ಕೆ ಹಿನ್ನೆಲೆಯಲ್ಲಿ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ತಮ್ಮ ಸದಸ್ಯರಿಗೆ ವಿಪ್ ಜಾರಿಗೊಳಿಸಿತ್ತು. ಸಭೆ ಆರಂಭವಾಗುತ್ತಿದ್ದಂತೆಯೆ ಕಾಂಗ್ರೆಸ್‌ನ ಡಿ. ನಾಗಭೂಷಣ್ ಅವರು ನೀರಿನ ಬಾಟಲಿ ಮೇಲಿನ ಹೆಸರು ಇಂಗ್ಲಿಷ್‌ನಲ್ಲಿ ಮುದ್ರಣ ಆಗಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು. ಇದಕ್ಕೆ ಪ್ರಾದೇಶಿಕ ಆಯುಕ್ತರು ಏನು ಪ್ರತಿಕ್ರಿಯಿಸದಿದ್ದಾಗ ಬಾಟಲಿ ಮೇಲಿನ ಕವರ್ ಅನ್ನು ಕೆಲವು ಸದಸ್ಯರು ತೆಗೆದರು.
ಮೇಯರ್ ಮತ್ತು ಉಪ ಮೇಯರ್ ಆಯ್ಕೆ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ವೀಡಿಯೋ ಚಿತ್ರೀಕರಣ ಮಾಡಲಾಯಿತು. ಕೈ ಎತ್ತಿಸುವ ಮೂಲಕ ನಡೆದ ಈ ಆಯ್ಕೆ ಪ್ರಕ್ರಿಯೆ ವೇಳೆ ಚುನಾವಣಾಧಿಕಾರಿ ಹಾಗೂ ಪ್ರಾದೇಶಿಕ ಆಯುಕ್ತೆ ಎಂ.ವಿ. ಜಯಂತಿ ಅವರು ವೀಡಿಯೋ ಚಿತ್ರೀಕರಿಸುತ್ತಿದ್ದ ವ್ಯಕ್ತಿಯನ್ನು ಮಾಧ್ಯಮ ಪ್ರತಿನಿಧಿ ಎಂದು ತಿಳಿದು, ವೀಡಿಯೋ ಚಿತ್ರೀಕರಿಸದಂತೆ ಸೂಚಿಸಿದ್ದರು. ಆದರೆ ಕಾಂಗ್ರೆಸ್ ಅಭ್ಯರ್ಥಿ ಪರ ಕೈ ಎತ್ತಿದವರ ಹೆಸರಿನಲ್ಲಿ ಪಕ್ಷೇತರ ಸದಸ್ಯ ಶ್ರೀಕಂಠಯ್ಯ ಅವರ ಹೆಸರು ಸೇರಿ ಗೊಂದಲವಾದಾಗ ಚಿತ್ರೀಕರಿಸುವಂತೆ ಸೂಚಿಸಿದರು.
ಈ ಮಧ್ಯೆ ವಿಧಾನ ಪರಿಷತ್ ಸದಸ್ಯ ಗೋ. ಮಧುಸೂದನ್ ಮತ್ತು ಕಾಂಗ್ರೆಸ್‌ನ ಶಾಸಕ ತನ್ವೀರ್‌ಸೇಠ್ ಕೀಟಲೆ ಆರಂಭವಾಯಿತು. ಬಿಜೆಪಿ ಮತ್ತು ಜೆಡಿಎಸ್‌ನವರು ಓಡಿ ಹೋಗಿ ಮದುವೆಯಾಗಿದ್ದೀರಿ ಎಂದು ಗೋಮ ಅವರನ್ನು ಸೇಠ್ ಮೂದಲಿಸಿದರು. ನೀವಿನ್ನೂ 5 ವರ್ಷ ಅಧಿಕಾರದ ಕಡೆಗೆ ತಿರುಗಿ ನೋಡದಿರಿ, ಮುಂದೆ ಡಿಸೆಂಬರ್‌ನಲ್ಲಿ ಲೋಕಸಭೆ ಚುನಾವಣೆಯೂ ಬರುತ್ತದೆ ಎಂದು ಗೋಮ ಹೇಳುತ್ತಿದ್ದಂತೆಯೆ ಶಾಸಕ ವಾಸು ಪರವಾಗಿಲ್ಲ ನೀವೆ ಇರಿ ಎಂದರು.
ಮೇಯರ್ ಸ್ಥಾನಕ್ಕೆ ಆಯ್ಕೆ ನಡೆಯುವಾಗ ಅಧಿಕಾರಿಗಳ ಗೊಂದಲದಿಂದಾಗಿ ಪಕ್ಷೇತರ ಸದಸ್ಯರಾದ ಎಚ್.ಎನ್. ಶ್ರೀಕಂಠಯ್ಯ ಅವರು ಕಾಂಗ್ರೆಸ್‌ನ ಅಭ್ಯರ್ಥಿ ಮಂಜುಳಾ ಮಾನಸ ಅವರ ಪರ ಕೈ ಎತ್ತಿದ್ದಾರೆ ಎಂದು ದಾಖಲಿಸಿದ್ದರು. ಈ ವೇಳೆ ಸದಸ್ಯ ಸಂದೇಶ್ ಸ್ವಾಮಿ ಅಧಿಕಾರಿಗಳ ವಿರುದ್ಧ ಕಿಡಿ ಕಾರಿದರು.
ಉಪ ಮೇಯರ್ ಆಯ್ಕೆ ಪ್ರಕ್ರಿಯೆ ವೇಳೆ 5 ಮಂದಿ ಜೆಡಿಎಸ್ ಸದಸ್ಯರು ತಮ್ಮ ಸ್ಥಾನದಲ್ಲಿ ಇರದೆ ಬೇರೆ ಕಡೆ ಕುಳಿತು ಕೈ ಎತ್ತಿದ್ದಾರೆ. ಅವರ ಬೆಂಬಲವನ್ನು ಚುನಾವಣಾ ಅಧಿಕಾರಿಗಳು ಪರಿಗಣಿಸಬಾರದು ಎಂದು ಶಾಸಕ ತನ್ವೀರ್‌ಸೇಠ್ ಒತ್ತಾಯಿಸಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ಮೊದಲು ತಾವು ಚುನಾವಣೆಯ ಗಂಭೀರತೆ ಅರಿತು ಓಡಾಡುವುದನ್ನು ನಿಲ್ಲಿಸಿ ಎಂದು ತಿರುಗೇಟು ನೀಡಿದರು. ಈ ವೇಳೆ ಪಟ್ಟು ಸಡಿಲಿಸದ ಸೇಠ್ ಅವರು ಆ 5 ಮಂದಿ ಸದಸ್ಯರ ಬೆಂಬಲವನ್ನು ಪರಿಗಣಿಸಲಾಗುತ್ತದೊ, ಬಿಡತ್ತದೋ ಎಂಬುದನ್ನು ಖಾತರಿ ಪಡಿಸಬೇಕು ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಎಂ.ವಿ. ಜಯಂತಿ, ಮುಂದೆ ಹೀಗೆ ವರ್ತಿಸಿದರೆ ಪರಿಗಣಿಸುವುದಿಲ್ಲ ಎಂದರು.
ಗೊಂದಲ ಸೃಷ್ಟಿಸಿದ ಎಸ್‌ಡಿಪಿಐ ಸದಸ್ಯ: ಎಸ್‌ಡಿಪಿಐನಿಂದ ಸ್ಪರ್ಧಿಸಿ ಜಯಗಳಿಸಿರುವ ಪಾಲಿಕೆ ಸದಸ್ಯ ಸಿ. ಮಹದೇವ ಗೊಂದಲ ಸೃಷ್ಟಿಸಿದರು. ಮೇಯರ್ ಮತ್ತು ಉಪಮೇಯರ್ ಸ್ಥಾನದ ಕಾಂಗ್ರೆಸ್ ಅಭ್ಯರ್ಥಿಗಳ ಪರ ಕೈ ಎತ್ತಿದ್ದ ಸಿ. ಮಹದೇವ ಅವರು ಉಪ ಮೇಯರ್ ಚುನಾವಣೆ ವೇಳೆ ನಾಮಪತ್ರ ಸಲ್ಲಿಸಿದ್ದ ಎಸ್‌ಡಿಪಿಐನ ಎಸ್. ಸ್ವಾಮಿ ಪರವೂ ಕೈ ಎತ್ತಿದರು. ಆಗ ಚುನಾವಣಾ ಅಧಿಕಾರಿಗಳು ಅವರ ಬೆಂಬಲ ಪರಿಗಣಿಸಲಿಲ್ಲ.
ಸ್ಥಾಯಿ ಸಮಿತಿ ಚುನಾವಣೆಗಾಗಿ ಚರ್ಚೆ: ಉಪ ಮೇಯರ್ ಸ್ಥಾನಕ್ಕೆ ಉಮೇದುವಾರಿಕೆ ಸಲ್ಲಿಸಿರುವ ಅಭ್ಯರ್ಥಿಗಳ ಹೆಸರು ಪ್ರಕಟಿಸಿದ ಬಳಿಕ ಸ್ಥಾಯಿ ಸಮಿತಿ ಚುನಾವಣೆಯನ್ನು ಇಂದೆ ನಡೆಸಬೇಕೆ, ಬೇಡವೆ ಎಂಬ ಬಗ್ಗೆ ಬಿಸಿ ಬಿಸಿ ಚರ್ಚೆ ನಡೆಯಿತು. ವಿಧಾನ ಪರಿಷತ್ ಸದಸ್ಯ ಗೋ. ಮಧುಸೂದನ್, ಸಂದೇಶ್ ನಾಗರಾಜ್, ಶಾಸಕರಾದ ಜಿ.ಟಿ. ದೇವೇಗೌಡ ಅವರು ಬೇರೊಂದು ದಿನಾಂಕ ನಿಗದಿಪಡಿಸುವಂತೆ ಹೇಳಿದರು. ಇದಕ್ಕೆ ಬಿಜೆಪಿ ಮತ್ತು ಜೆಡಿಎಸ್‌ನ ಕೆಲವು ಸದಸ್ಯರೂ ಸಹ ಬೆಂಬಲ ನೀಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement