ಪಾಲಿಟೆಕ್ನಿಕ್ ಕಾಲೇಜು ಆರಂಭ
ಕ.ಪ್ರ.ವಾರ್ತೆ ಹುಣಸೂರು ಸೆ. 5
ಮುಂದಿನ ವರ್ಷದ ಶೈಕ್ಷಣಿಕ ಸಾಲಿನಿಂದ ಹುಣಸೂರಿನಲ್ಲಿ ಪಾಲಿಟೆಕ್ನಿಕ್ ಕಾಲೇಜು ಪ್ರಾರಂಭಿಸಲು ಸೂಕ್ತ ನಿವೇಶನವನ್ನು ಗುರುತಿಸಲು ಅಧಿಕಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆದೇಶಿಸಿದ್ದು, ಇದು ತಾಲೂಕಿನ ಜನತೆಗೆ ಈ ಭಾರಿಯ ಗೌರಿ-ಗಣೇಶ ಹಬ್ಬದ ಉಡುಗರೆಯಾಗಿದೆ ಎಂದು ಶಾಸಕ ಎಚ್.ಪಿ. ಮಂಜುನಾಥ್ ಹೇಳಿದ್ದಾರೆ.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಮ್ಮ ಹಲವಾರು ವರ್ಷಗಳ ಕನಸಿನ ಕೂಸು ಪಾಲಿಟೆಕ್ನಿಕ್ ಕಾಲೇಜು ಆರಂಭಕ್ಕೆ ಮುಖ್ಯಮಂತ್ರಿಗಳಿಂದ ಹಸಿರು ನಿಶಾನೆ ದೊರೆತಿದೆ. ಈಗಾಗಲೇ ಅಧಿಕಾರಿಗಳಿಗೆ ಸೂಚಿಸಿದ್ದು, ಮುಂದಿನ ಸಾಲಿನಲ್ಲಿ ಕಾಲೇಜು ಪ್ರಾರಂಭಿಸಲು ಅಧಿಕಾರಿಗಳಿಗೆ ಅಗತ್ಯವಾದ ಎಲ್ಲಾ ಸೌಲಭ್ಯ ಕಲ್ಪಿಸಿಲು ತಾವು ಸಿದ್ದವಿರುವುದಾಗಿ ತಿಳಿಸಿದರು.
ಕಳೆದ ಐದು ವರ್ಷದಲ್ಲಿ ತಾಲೂಕಿನ ಶೈಕ್ಷಣಿಕ ಅಭಿವೃದ್ಧಿಗಾಗಿ 19.47 ಕೋಟಿ ಅನುದಾನ ಬಿಡುಗಡೆಯಾಗಿ ಶೇ.75ರಷ್ಟು ಕಾಮಗಾರಿಗಳು ಪೂರ್ಣಗೊಂಡಿವೆ. ಈ ಸಾಲಿನಲ್ಲಿ 6 ಕೋಟಿ ಬಿಡುಗಡೆಯಾಗಿದ್ದು ಶೀಘ್ರವೇ ಕಾಮಗಾರಿಗಳಿಗೆ ಚಾಲನೆ ನೀಡಲಾಗುತ್ತದೆ ಎಂದರು.
ಸೆ.6 ರಂದು ರತ್ನಪುರಿಯ ಕಸ್ತೂರಬಾ ಶಾಲೆ ಕಾಮಗಾರಿಗೆ ಚಾಲನೆ ನೀಡಲಾಗುತ್ತಿದೆ. 6 ಕೋಟಿ ಯೋಜನೆ ರೂಪಿಸಲಾಗಿದೆ. ಚಿಕ್ಕಹುಣಸೂರು ಶಾಲಾ ಕಟ್ಟಡ ನಿರ್ಮಾಣಕ್ಕೆ ಪ್ರಥಮ ಹಂತವಾಗಿ 38 ಲಕ್ಷ ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಾಗುತ್ತಿದೆ. ಸೆ.19 ರಂದು ಹನಗೋಡು ಪದವಿ ಕಾಲೇಜಿಗೆ 2 ಕೋಟಿ, ಪಟ್ಟಣದ ಮಹಿಳಾ ಕಾಲೇಜಿನ ಮೊದಲ ಅಂತಸ್ತಿಗೆ ಹಾಗೂ ಅರಸು ಪದವಿ ಕಾಲೇಜಿನ ಎರಡನೇ ಅಂತಸ್ತಿಗೆ ತಲಾ ಒಂದೊಂದು ಕೋಟಿ, ನಿಗದಿಪಡಿಸಲಾಗಿದೆ ಎಂದು ಅವರು ತಿಳಿಸಿದರು.
ನಾಲೆಗಳ ಪುನರುಜ್ಜೀವ: ತಾಲೂಕಿನ ಹನಗೋಡು ಅಣೆಕಟ್ಟು ಹಾಗೂ ಹಾರಂಗಿ ನಾಲಾ ವ್ಯಾಪ್ತಿಯ ಎಲ್ಲ ನಾಲೆಗಳ ಆಧುನೀಕರಣಕ್ಕಾಗಿ ಯೋಜನೆಯ ಸಮಗ್ರ ವರದಿ ತಯಾರಾಗಿ ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲರ ಬಳಿಯಿದ್ದು, ಈ ಕುರಿತಂತೆ ಸಚಿವರಲ್ಲಿ ತಾವು ಮಾತನಾಡಿದ್ದೇನೆ. ಒಟ್ಟು 120 ಕೋಟಿ ಅವಶ್ಯಕತೆಯಿದ್ದು, ಪ್ರಸಕ್ತ ಸಾಲಿನಲ್ಲೇ ಅನುದಾನ ನೀಡುವುದಾಗಿ ಮಂತ್ರಿಗಳು ಭರವಸೆ ನೀಡಿದ್ದಾರೆ ಎಂದರು.
ತಾಲೂಕಿನಾದ್ಯಂತ ರಸ್ತೆ ಅಭಿವೃದ್ಧಿಗಾಗಿ 65 ಕೋಟಿ ಪ್ರಸ್ತಾವನೆ ಸಲ್ಲಿಸಲಾಗಿದ್ದು, ರಸ್ತೆ ಅಭಿವೃದ್ಧಿ ಕಾಮಗಾರಿಗಳು ಎರಡು ಹಂತಗಳಲ್ಲಿ ನಡೆಯಲಿವೆ. ಮಲೆನಾಡು ಅಭಿವೃದ್ಧಿ ಯೋಜನೆಯಡಿ ಪ್ರಸ್ತುತ್ರ37 ಲಕ್ಷ ಅನುದಾನ ದೊರಕಿದೆ. ಪಟ್ಟಣದ ಪಂಪ್‌ಹೌಸ್ ಬಳಿ ಸ್ಮಶಾನಕ್ಕೆ ಹೋಗಲು ತೂಗು ಸೇತುವೆ ನಿರ್ಮಾಣಕ್ಕೆ ಒಂದು ಕೋಟಿ ರು.ಗಳ ವೆಚ್ಚ ತಗುಲಲಿದ್ದು, ಈಗಿರುವ್ರ37 ಲಕ್ಷ ಜತೆ ಹೆಚ್ಚುವರಿ ಅನುದಾನಕ್ಕಾಗಿ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಹೇಳಿದರು.
ಅಂಬೇಡ್ಕರ್ ಭವನಕ್ಕೆ ಹೆಚ್ಚುವರಿ ಅನುದಾನ: ಪಟ್ಟಣದ ಅಂಬೇಡ್ಕರ್ ಭವನದ ಮೇಲಂತಸ್ತಿನ ಕಟ್ಟಡ ನಿರ್ಮಾಣಕ್ಕಾಗಿ ಒಂದು ಕೋಟಿ ರು. ಅನುದಾನ ದೊರೆತಿದ್ದು, ಬಾಬು ಜಗಜೀವನರಾಂ ಭವನದ ಮೇಲಂತಸ್ತಿಗಾಗಿ ಒಂದು ಕೋಟಿ ರು.ನ ಪ್ರಸ್ತಾವನೆ ಸಲ್ಲಿಸಲಾಗಿದೆ. ಶಾಸಕರ ನಿಧಿಯಿಂದ ಎಸ್‌ಇಪಿ ಹಾಗೂ ಟಿಎಸ್‌ಪಿ ಯೋಜನೆಗೆ 2 ಕೋಟಿ, ನಗರೋತ್ಥಾನ ಯೋಜನೆಯಡಿ 6 ಕೋಟಿ ಕಾಮಗಾರಿಗೆ ಅನುದಾನ ಮಂಜೂರಾಗುವ ಹಂತದಲ್ಲಿದ್ದು, ಈ ತಿಂಗಳಾಂತ್ಯದಲ್ಲಿ ಅನುದಾನ ದೊರೆಯಲಿದೆ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿಳಿಕೆರೆ ಬಸವರಾಜು, ಜಿಪಂ ಸದಸ್ಯರಾದ ಡಾ. ಪುಷ್ಪ ಅಮರನಾಥ್, ರಮೇಶ್, ಪುರಸಭಾ ಸದಸ್ಯೆ ಸುನೀತ ಜಯರಾಮೇಗೌಡ, ಮುಖಂಡರಾದ ಧರ್ಮಾಪುರ ರಮೇಶ್, ಕಲ್ಕುಣಿಕೆ ಶ್ರೀನಿವಾಸ್, ಅಜ್ಗಾರ್ ಪಾಷಾ, ಹಂದನಹಳ್ಳಿ ಸೋಮಶೇಖರ್ ಇದ್ದರು.