ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಬಿಸಿಯೂಟ ಯೋಜನೆಗೆ ಪ್ರತ್ಯೇಕ ಇಲಾಖೆ ತೆರೆಯಲಿ

Rashmi Kasaragodu
Updated On : 5 Sept 2013, 11:59 am

ಕ.ಪ್ರ.ವಾರ್ತೆ  ಮೈಸೂರು  ಸೆ. 5
ಬಿಸಿಯೂಟ ಯೋಜನೆಗೆ ಪ್ರತ್ಯೇಕ ಇಲಾಖೆ ತೆರೆಯುವುದು ಅವಶ್ಯಕ ಎಂದು ವಿಧಾನಪರಿಷತ್ ಸದಸ್ಯ ಗೋ. ಮಧುಸೂದನ್ ಆಗ್ರಹಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಶಿಕ್ಷಕರ ಮತ್ತು ಮಕ್ಕಳ ಕಲ್ಯಾಣನಿಧಿ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಸಂಯುಕ್ತವಾಗಿ ಕಲಾಮಂದಿರದಲ್ಲಿ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಜನ್ಮದಿನದ ಅಂಗವಾಗಿ ಗುರುವಾರ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ, 2013ನೇ ಸಾಲಿನ ಜಿಲ್ಲಾ ಶಿಕ್ಷಕ ಪ್ರಶಸ್ತಿ ಪ್ರದಾನ ಹಾಗೂ ನಿವೃತ್ತ ಶಿಕ್ಷಕರಿಗೆ ಅಭಿನಂದನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಶಾಲೆಯಲ್ಲಿ ಮಧ್ಯಾಹ್ನದ ಬಿಸಿಯೂಟ ತಯಾರು ಮಾಡಲು, ಮಕ್ಕಳಿಗೆ ಹಾಲು ವಿತರಿಸಲು ಹಾಗೂ ಕಬ್ಬಿಣಾಂಶದ ಮಾತ್ರೆಗಳನ್ನು ವಿತರಿಸುವಲ್ಲಿ ಶಿಕ್ಷಕರ ಜವಾಬ್ದಾರಿ ಹೆಚ್ಚಾಗಿದೆ. ಇದರಿಂದಾಗಿ ಅವರು ಪಾಠ ಮಾಡಲು ಸಮಯದ ಅಭಾವ ಎದುರಿಸುವಂತಾಗಿದೆ. ಆದ್ದರಿಂದ ಬಿಸಿಯೂಟ ಯೋಜನೆ ಹಾಗೂ ಮತ್ತಿತರ ಶಾಲಾ ಕಾರ್ಯಕ್ರಮದ ಅನುಷ್ಠಾನಕ್ಕೆ ತಮಿಳುನಾಡು ಮಾದರಿಯಲ್ಲಿ ರಾಜ್ಯ ಸರ್ಕಾರ ಪ್ರತ್ಯೇಕ ಇಲಾಖೆ ತೆರೆಯಬೇಕು ಎಂದರು.
ಹೊಸ ಪರೀಕ್ಷೆ ಪದ್ಧತಿಯಿಂದ ಶಿಕ್ಷಕರು ವರದಿಗಾಗಿ ಬರೆಯುವ ಕೆಲಸ ಹೆಚ್ಚಾಗಿರುವುದರಿಂದ ಬೋಧನೆಗೆ ಮಹತ್ವ ಕಾಣದಾಗಿದೆ. ಅಲ್ಲದೆ ಶಾಲೆಯ ಶೌಚಾಲಯವನ್ನು ಮಕ್ಕಳ ಕೈಯಲ್ಲಿ ಸ್ವಚ್ಛ ಮಾಡಿಸಿದರೆ ಮಾಧ್ಯಮದಲ್ಲಿ ಸುದ್ದಿಯಾಗಲಿದೆ. ಇನ್ನು ಶಿಕ್ಷಕರು ಮಾಡಲು ನಿಂತರೆ ಪಾಠ ಮಾಡುವವರು ಯಾರು ಎಂದು ಪ್ರಶ್ನಿಸಿದ ಅವರು, ಇದಕ್ಕೆ ಜಿಲ್ಲಾ ಪಂಚಾಯತ್ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು ಎಂದು ಆಗ್ರಹಿಸಿದರು.    
ಸಂಬಳ ವಿಳಂಬ: ಜಿಲ್ಲಾ ಶಿಕ್ಷಕರು ವೇತನ ಪಡೆಯಲು 10ನೇ ತಾರೀಖಿನವರೆಗೆ ಕಾಯಬೇಕಿದೆ. ವೇತನ ಕಡತ ತಾಲೂಕು ಪಂಚಾಯಿತಿಯಲ್ಲಿ ಮೇಲು ಸಹಿ ಪಡೆದು, ನಂತರ ಬಿಇಒ ಕಚೇರಿಗೆ ಬಂದು ಅಲ್ಲಿಂದ ಖಜಾನೆಗೆ ಬರಬೇಕಿದೆ. ಇಂತಹ ವ್ಯವಸ್ಥೆ ರಾಜ್ಯದಲ್ಲಿ ಎಲ್ಲಿಯೂ ಇಲ್ಲ. ಮೊದಲು ಇದ್ದಂತೆ ಬಿಇಒ ಕಚೇರಿಯಿಂದ ಖಜಾನೆಗೆ ಬರುವ ಮೂಲಕ ವೇತನ ಪಾವತಿಯಾಗುವಂತೆ ಆದೇಶಿಸಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ವಾಸು ಮಾತನಾಡಿ, ಶಿಕ್ಷಕರ ಯೋಗಕ್ಷೇವುವನ್ನು ಸರ್ಕಾರ ಹಾಗೂ ಸಮಾಜ ನೋಡಿಕೊಳ್ಳಬೇಕು. ಡಾ. ರಾಧಾಕೃಷ್ಣನ್ ಅವರ ಕಾಲದಲ್ಲಿ ಇದ್ದಂತೆ ಗುರು- ಶಿಷ್ಯರ ಉತ್ತಮ ಬಾಂಧವ್ಯ ವಾತಾವರಣ ಇಂದು ನಿರ್ಮಾಣವಾಗಬೇಕು ಎಂದು ಆಶಿಸಿದರು.
ಜಿಲ್ಲೆಯ ವಿವಿಧ ಶಾಲೆಗಳ ಶಿಕ್ಷಕರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಅಲ್ಲದೆ ನಿವೃತ್ತ ಶಿಕ್ಷಕರನ್ನು ಸನ್ಮಾನಿಸಿಲಾಯಿತು.
ಕಾರ್ಯಕ್ರಮವನ್ನು ಶಾಸಕ ತನ್ವಿರ್‌ಸೇಠ್ ಉದ್ಘಾಟಿಸಿದರು. ಶಾಸಕರಾದ ಜಿ.ಟಿ. ದೇವೇಗೌಡ, ಎಂ.ಕೆ. ಸೋಮಶೇಖರ್, ಸಿ.ಎಚ್. ವಿಜಯಶಂಕರ್ ಮುಖ್ಯ ಅತಿಥಿಗಳಾಗಿದ್ದರು. ಮೈಸೂರು ವಿವಿಯ ಪ್ರಸಾರಾಂಗ ನಿರ್ದೇಶಕ ಪ್ರೊ.ಸಿ. ನಾಗಣ್ಣ ಪ್ರದಾನ ಭಾಷಣ ಮಾಡಿದರು.
ಜಿಪಂ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಕೆ.ಲಲಿತಾ ದೇವೇಗೌಡ, ಜಿಪಂ ಮಾಜಿ ಉಪಾಧ್ಯಕ್ಷ ಡಾ.ಶಿವರಾಂ, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಎಚ್.ಕೆ. ರಾಮು, ಜಿಲ್ಲಾಧಿಕಾರಿ ಸಿ.ಶಿಖಾ, ಜಿಪಂ ಸಿಇಒ ಪಿ.ಎ. ಗೋಪಾಲ್, ಬಿಇಒಗಳಾದ ಕರೀಗೌಡ, ಆರ್. ರಘುನಂದನ್, ಡಾ.ಆರ್, ಕಾಂತ ಇದ್ದರು. ಡಿಡಿಪಿಐ ಬಿ.ಕೆ. ಬಸವರಾಜು ಸ್ವಾಗತಿಸಿದರು.
ಅಗೌರವ: ವೇದಿಕೆಯಲ್ಲಿ ಒಂದಡೆ ಗೋ. ಮಧುಸೂದನ್ ಭಾಷಣ ಮಾಡುತ್ತಿದ್ದರೆ, ಮತ್ತೊಂದೆಡೆ ಸಭಿಕರ ಸಾಲಿನಲ್ಲಿದ್ದ ಶಿಕ್ಷಕರನ್ನು ಕರೆತಂದು ವೇದಿಕೆಯಲ್ಲಿ ಕೂರಿಸಿ, ಅವರ ಹೆಸರನ್ನು ಪ್ರಕಟಿಸದೆ ತರಾತುರಿಯಲ್ಲಿ ಸನ್ಮಾನಿಸಿದ್ದು ಸಭಿಕರ ಅಸಮಾಧಾನಕ್ಕೂ ಕಾರಣವಾಯಿತು.


ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರು


ಜಿಲ್ಲೆಯ ವಿವಿಧ ಸರ್ಕಾರಿ ಶಾಲೆಗಳಲ್ಲಿ ಉತ್ತಮ ಸೇವೆ ಸಲ್ಲಿಸಿರುವ 15 ಮಂದಿ ಶಿಕ್ಷಕರಿಗೆ ಗುರುವಾರ ಕಲಾಮಂದಿರದಲ್ಲಿ ನಡೆದ ಶಿಕ್ಷಕರ ದಿನಾಚರಣೆಯಲ್ಲಿ ಸನ್ಮಾನಿಸಲಾಯಿತು. ಪ್ರಾಥಮಿಕ ಶಾಲಾ ವಿಭಾಗದಲ್ಲಿ ಎಚ್.ಡಿ. ಕೋಟೆ ತಾಲೂಕು ಚಿಕ್ಕೆರೆಯೂರು ಸಿ.ಎಸ್. ಕುಮಾರಸ್ವಾಮಿ, ಹುಣಸೂರು ತಾಲೂಕು ಕಣಗಾಲು ಡಿ.ಕೆ. ಸ್ವಾಮಿ, ಕೆ.ಆರ್. ನಗರ ತಾ. ಗಾಯನಹಳ್ಳಿಯ ಶಿವಮೂರ್ತಿ, ಪಿರಿಯಾಪಟ್ಟಣ ತಾ. ಜವರಿಕೊಪ್ಪಲು ಎಂ.ಎನ್. ಮಲ್ಲಪ್ಪ, ನಂಜನಗೂಡು ತಾ., ಬಡಗಲಹುಂಡಿಯ ಮಹದೇವ ನಾಯಕ, ಟಿ.ನರಸೀಪುರ ತಾ. ಬೆಟ್ಟದ ಹೊಸೂರಿನ ಎಂ. ಗುರುಸ್ವಾಮಿ, ಮೈಸೂರು ತಾ. ಬೋಗಾದಿಯ ಡಿ.ಎಸ್. ಚಂದ್ರಶೇಖರ್, ಚಿಕ್ಕೇಗೌಡನಕೊಪ್ಪಲಿನ ಎಂ.ಪಿ. ರಂಗಸ್ವಾಮಿ, ಮೈಸೂರು ಉತ್ತರ ವಲಯದ ಜ್ಯೋತಿನಗರ ಹಾರ್ಸ್‌ಲೇನ್‌ನ ಟಿ.ಸಿ ನಾಗರಾಜು, ದಕ್ಷಿಣ ವಲಯ ತೊಣಚಿಕೊಪ್ಪಲಿನ ಎಸ್. ಸುಬ್ಬಲಕ್ಷ್ಮೀ ಅವರಿಗೆ ಪ್ರಶಸ್ತಿ ನೀಡಲಾಯಿತು. ಪ್ರೌಢಶಾಲಾ ವಿಭಾಗದಲ್ಲಿ ಮೈಸೂರು ತಾ. ಯರಗನಹಳ್ಳಿಯ ಎಚ್.ಎಸ್. ಶಾರದಾ, ಇಲವಾಲದ ವೈ.ಜೆ. ದೇವರಾಜ್, ಟಿ.ನರಸಿಪುರ ತಾ. ರಂಗಸಮುದ್ರದ ಎಂ. ಪ್ರಕಾಶ್, ಅತ್ತಹಳ್ಳಿಯ ಚಿನ್ನಸ್ವಾಮಿ ಹಾಗೂ ನಂಜನಗೂಡು ತಾ. ದೇವನೂರಿನ ಮಹದೇವಸ್ವಾಮಿ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.


ಜಿಲ್ಲಾಡಳಿತ ವಿರುದ್ಧ ತನ್ವೀರ್ ಸೇಠ್ ಕಿಡಿ


ಶಿಕ್ಷಕರನ್ನು ಸರಿಯಾಗಿ ಗೌರವಿಸುವಲ್ಲಿ ಜಿಲ್ಲಾಡಳಿತ ಕಾರ್ಯಕ್ರಮ ಹಮ್ಮಿಕೊಂಡಿಲ್ಲ ಎಂದು ಶಾಸಕ ತನ್ವೀರ್ ಸೇಠ್ ಕಿಡಿಕಾರಿದರು. ಜಿಲ್ಲಾಡಳಿತ ಗುರುವಾರ ಏರ್ಪಡಿಸಿದ್ದ ಜಿಲ್ಲಾಮಟ್ಟದ ಶಿಕ್ಷಕರ ದಿನಾಚರಣೆ  ಉದ್ಘಾಟಿಸಿ ಮಾತನಾಡಿದ ಅವರು, ಸಮಾಜ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಬಹುಮುಖ್ಯ. ಅಂತಹ ಶಿಕ್ಷಕರನ್ನು ಸರಿಯಾದ ರೀತಿಯಲ್ಲಿ ಗೌರವಿಸುವ ಕೆಲಸ ಮಾಡಬೇಕು. ಈ ರೀತಿ ತರಾತುರಿಯಲ್ಲಿ ಅವರನ್ನು ಸನ್ಮಾನಿಸುತ್ತಿರುವುದು ಸರಿಯಲ್ಲ ಎಂದರು. ಮೇಯರ್ ಹಾಗೂ ಉಪಮೇಯರ್ ಚುನಾವಣೆ ಇರುವ ಕಾರಣಕ್ಕೆ ವೇದಿಕೆ ಗಣ್ಯರು ಬಹುಬೇಗ ಹೊರಟ ಕಾರಣಕ್ಕೆ ಇಂತಹ ಸನ್ನಿವೇಶ ಎದುರಾಗಿದೆ. ಶಿಕ್ಷಕರ ದಿನಾಚರಣೆಯನ್ನು ಬೇರೆ ಸಮಯಕ್ಕೆ ನಿಗದಿಗೊಳಿಸಬಹುದಾಗಿತ್ತು. ಅಧಿಕಾರಿಗಳ ಹೊಂದಾಣಿಕೆ ಕೊರತೆಯಿಂದ ಇಂತಹ ಪರಿಸ್ಥಿತಿ ಉದ್ಭವಿಸಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement