ರಾಜೇಶ್ವರಿ ಮೇಯರ್, ಶೈಲೇಂದ್ರ ಉಪ ಮೇಯರ್
ಕ.ಪ್ರ.ವಾರ್ತೆ ಮೈಸೂರು ಸೆ. 5
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಜಿಲ್ಲೆಯ ಮೈಸೂರು ನಗರ ಪಾಲಿಕೆಯಲ್ಲಿ ಕಾಂಗ್ರೆಸ್ ಅನ್ನು ಅಧಿಕಾರದಿಂದ ದೂರ ಇಡುವ ಪ್ರಯತ್ನದಲ್ಲಿ ಜೆಡಿಎಸ್ ಮತ್ತು ಬಿಜೆಪಿ ಸಫಲವಾಗಿದ್ದು, ನಗರ ಪಾಲಿಕೆಯ 27ನೇ ಮೇಯರ್ ಆಗಿ ಎನ್.ಎಂ. ರಾಜೇಶ್ವರಿ ಮತ್ತು ಉಪ ಮೇಯರ್ ಆಗಿ ಶೈಲೇಂದ್ರ ಆಯ್ಕೆಯಾಗಿದ್ದಾರೆ.
ಗುರುವಾರ ನಡೆದ ಮೇಯರ್ ಮತ್ತು ಉಪ ಮೇಯರ್ ಆಯ್ಕೆ ಪ್ರಕ್ರಿಯೆಯಲ್ಲಿ ಜೆಡಿಎಸ್ನ ಎನ್.ಎಂ. ರಾಜೇಶ್ವರಿ ಮತ್ತು ಶೈಲೇಂದ್ರ ಅವರು ತಲಾ 39 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಆ ಮೂಲಕ ಮೈಸೂರು ನಗರ ಪಾಲಿಕೆಯ 5ನೇ ಮಹಿಳಾ ಮೇಯರ್ ಆಗಿ ಆಯ್ಕೆಯಾಗಿದ್ದಾರೆ. ಮೇಯರ್ ಸ್ಥಾನವು ಸಾಮಾನ್ಯ ಮಹಿಳೆಗೂ ಮತ್ತು ಉಪ ಮೇಯರ್ ಸ್ಥಾನ ಪ.ಜಾತಿಗೆ ಮೀಸಲಾಗಿತ್ತು. ಮೇಯರ್ ಸ್ಥಾನಕ್ಕೆ ಉಮೇದುವಾರಿಕೆ ಸಲ್ಲಿಸಿದ್ದ ಕಾಂಗ್ರೆಸ್ನ ಮಂಜುಳಾ ಮಾನಸ 29 ಮತ, ಉಪ ಮೇಯರ್ ಸ್ಥಾನಕ್ಕೆ ಉಮೇದುವಾರಿಕೆ ಸಲ್ಲಿಸಿದ್ದ ಕಾಂಗ್ರೆಸ್ನ ಭಾಗ್ಯವತಿ 32 ಮತ್ತು ಎಸ್ಡಿಪಿಐನ ಎಸ್.ಸ್ವಾಮಿ 2 ಮತ ಪಡೆದರು.
ರಾಜ್ಯದಲ್ಲಿ ಇತ್ತೀಚೆಗೆ ನಡೆದ ಲೋಕಸಭೆ ಮತ್ತು ವಿಧಾನ ಪರಿಷತ್ ಚುನಾವಣೆಯಲ್ಲಿನ ಹೊಂದಾಣಿಕೆಯೆ ನಗರ ಪಾಲಿಕೆ ಚುನಾವಣೆಗೂ ನಡೆದಿದೆ. ಮೈಸೂರಿನ ಜಿಪಂನಲ್ಲಿಯೂ ಕಾಂಗ್ರೆಸ್ ಅನ್ನು ಅಧಿಕಾರದಿಂದ ದೂರ ಇಡಲು ಇನ್ನಿಲ್ಲದ ಕಸರತ್ತು ನಡೆಸಿ, ಜೆಡಿಎಸ್ ಮತ್ತು ಬಿಜೆಪಿ ಅಧಿಕಾರ ಅನುಭವಿಸುತ್ತಿರುವಾಗಲೆ, ಮೈಸೂರು ನಗರ ಪಾಲಿಕೆಯಲ್ಲಿಯೂ ಕಾಂಗ್ರೆಸ್ ಅನ್ನು ದೂರ ಇರಿಸುವ ಮೂಲಕ ಅದಕ್ಕೆ ಮುಖಭಂಗವಾಗುವಂತೆ ಮಾಡುವಲ್ಲಿ ಯಶಸ್ವಿಯಾಗಿವೆ.
ನಾಲ್ಕು ವರ್ಷದ ಬಳಿಕ..: ಪ್ರಾದೇಶಿಕ ಆಯುಕ್ತೆ ಎಂ.ವಿ. ಜಯಂತಿ, ಹೆಚ್ಚುವರಿ ಪ್ರಾದೇಶಿಕ ಆಯುಕ್ತ ಬಿ. ರಾಮು ಮತ್ತು ಪಾಲಿಕೆ ಆಯುಕ್ತ ಡಾ.ಎಂ.ಆರ್. ರವಿ ನೇತೃತ್ವದಲ್ಲಿ ನಡೆದ ಈ ಆಯ್ಕೆ ಪ್ರಕ್ರಿಯೆಯನ್ನು ಸದಸ್ಯರ ಕೈ ಎತ್ತಿಸುವ ಮೂಲಕ ನಡೆಸಲಾಯಿತು. ಪಾಲಿಕೆ ಚುನಾವಣೆ ಎದುರಿಸಿ ಆಯ್ಕೆಯಾದ ಮೊದಲಲ್ಲೇ ಎನ್.ಎಂ. ರಾಜೇಶ್ವರಿ ಮತ್ತು ಶೈಲೇಂದ್ರ ಅವರು ಮೇಯರ್ ಮತ್ತು ಉಪ ಮೇಯರ್ ಆದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 4 ವರ್ಷಗಳ ಬಳಿಕ ಒಂದೆ ಪಕ್ಷಕ್ಕೆ ಮೇಯರ್ ಮತ್ತು ಉಪ ಮೇಯರ್ ಸ್ಥಾನ ಒಲಿದಿದೆ. ನಾಲ್ಕು ವರ್ಷದ ಹಿಂದೆ ಕಾಂಗ್ರೆಸ್ನ ಅಯೂಬ್ ಖಾನ್ ಮತ್ತು ಕಮಲಾ ವೆಂಕಟೇಶ್ ಮೇಯರ್ ಮತ್ತು ಉಪ ಮೇಯರ್ ಆಗಿ ಅಧಿಕಾರ ಅನುಭವಿಸಿದ್ದರು. ನೂತನ ಮೇಯರ್ ಮತ್ತು ಉಪ ಮೇಯರ್ ಅವಧಿ 2014ರ ಸೆ. 4ಕ್ಕೆ ಕೊನೆಗೊಳ್ಳಲಿದೆ.
ಬೆಳಗ್ಗೆ 8ಕ್ಕೆ ಆರಂಭವಾದ ಚುನಾವಣಾ ಪ್ರಕ್ರಿಯೆಯಲ್ಲಿ 9.30ರವರೆಗೆ ನಾಮಪತ್ರ ಸಲ್ಲಿಕೆಗೆ ಅವಕಾಶ ನೀಡಲಾಗಿತ್ತು. ಮೇಯರ್ ಸ್ಥಾನಕ್ಕೆ ಕಾಂಗ್ರೆಸ್ನ ಮಂಜುನಾ ಮಾನಸ ಅವರು ದ್ವಿ ಪ್ರತಿಯಲ್ಲಿ ನಾಮಪತ್ರ ಸಲ್ಲಿಸಿದ್ದರು. ಒಂದು ಪ್ರತಿಗೆ ರಾಜಲಕ್ಷ್ಮಿ, ಪುಷ್ಪಲತಾ ಚಿಕ್ಕಣ್ಣ, ಮತ್ತೊಂದು ಪ್ರತಿಗೆ ಶಂಶದ್ ಬೇಗಂ ಮತ್ತು ಅಯೂಬ್ಖಾನ್ ಕ್ರಮವಾಗಿ ಸೂಚಕರು ಮತ್ತು ಅನುಮೋದಕರಾಗಿದ್ದರು. ಮೇಯರ್ ಸ್ಥಾನಕ್ಕೆ ಜೆಡಿಎಸ್ನ ಎನ್.ಎಂ. ರಾಜೇಶ್ವರಿ ಅವರು ಸಹ ದ್ವಿ ಪ್ರತಿಯಲ್ಲಿ ನಾಮಪತ್ರ ಸಲ್ಲಿಸಿದ್ದರು. ಒಂದು ಪ್ರತಿಗೆ ಸಂದೇಶ್ಸ್ವಾಮಿ, ಆರ್. ಲಿಂಗಪ್ಪ, ಮತ್ತೊಂದು ಪ್ರತಿಗೆ ರವಿಕುಮಾರ್ ಮತ್ತು ಕೆ.ಟಿ. ಚಲುವೆಗೌಡ ಅವರು ಕ್ರಮವಾಗಿ ಸೂಚಕರು ಮತ್ತು ಅನುಮೋದಕರಾಗಿದ್ದರು.
ಉಪ ಮೇಯರ್ ಸ್ಥಾನಕ್ಕೆ ಕಾಂಗ್ರೆಸ್ನ ಭಾಗ್ಯವತಿ ದ್ವಿಪ್ರತಿಯಲ್ಲಿ ನಾಮಪತ್ರ ಸಲ್ಲಿಸಿದ್ದರು. ಒಂದು ಪ್ರತಿಗೆ ರತ್ನಮ್ಮ, ಶೌಕತ್ ಪಾಷ, ಮತ್ತೊಂದು ಪ್ರತಿಗೆ ಡಿ.ನಾಗಭೂಷಣ್ ಮತ್ತು ಪುರುಷೋತ್ತಮ್ ಕ್ರಮವಾಗಿ ಸೂಚಕರು ಮತ್ತು ಅನುಮೋದಕರಾಗಿದ್ದರು. ಜೆಡಿಎಸ್ನ ಶೈಲೇಂದ್ರ ಸಹ ಉಪ ಮೇಯರ್ ಸ್ಥಾನಕ್ಕೆ ದ್ವಿ ಪ್ರತಿಯಲ್ಲಿ ನಾಮಪತ್ರ ಸಲ್ಲಿಸಿದ್ದರು. ಒಂದು ಪ್ರತಿಗೆ ಕೆ.ಟಿ. ಚಲುವೆಗೌಡ, ಎಂ.ಜೆ. ರವಿಕುಮಾರ್, ಮತ್ತೊಂದು ಪ್ರತಿಗೆ ಆರ್. ಲಿಂಗಪ್ಪ ಮತ್ತು ಸಂದೇಶ್ ಸ್ವಾಮಿ ಕ್ರಮವಾಗಿ ಸೂಚಕರು ಮತ್ತು ಅನುಮೋದಕರಾಗಿದ್ದರು. ಎಸ್ಡಿಪಿಐನ ಎಸ್. ಸ್ವಾಮಿ ಅವರ ನಾಮಪತ್ರಕ್ಕೆ ರೇಷ್ಮ ಜಮೀನ್ ಸೂಚಕರಾಗಿ ಮತ್ತು ಸಿ. ಮಹದೇವು ಅನುಮೋದಕರಾಗಿದ್ದರು. ನಾಮಪತ್ರ ಹಿಂತೆಗೆತಕ್ಕೆ 5 ನಿಮಿಷಗಳ ಕಾಲಾವಕಾಶ ನೀಡಲಾಗಿತ್ತು.
ನಗರ ಪಾಲಿಕೆಯ 65 ಸದಸ್ಯರ ಪೈಕಿ ಕಾಂಗ್ರೆಸ್ 22, ಜೆಡಿಎಸ್ 20, ಬಿಜೆಪಿ 12, ಎಸ್ಡಿಪಿಐ 3, ಕೆಜೆಪಿ 1, ಬಿಎಸ್ಆರ್ 1 ಮತ್ತು ಪಕ್ಷೇತರರು 6 ಮಂದಿ ಇದ್ದಾರೆ. ಅಲ್ಲದೆ ಕಾಂಗ್ರೆಸ್ನ ಶಾಸಕರಾದ ಎಂ.ಕೆ. ಸೋಮಶೇಖರ್, ವಾಸು, ತನ್ವೀರ್ಸೇಠ್, ಜೆಡಿಎಸ್ ಶಾಸಕ ಜಿ.ಟಿ. ದೇವೇಗೌಡ, ವಿಧಾನ ಪರಿಷತ್ ಸದಸ್ಯರಾದ ಮರಿತಿಬ್ಬೇಗೌಡ, ಸಂದೇಶ್ ನಾಗರಾಜ್, ಬಿಜೆಪಿಯ ವಿಧಾನ ಪರಿಷತ್ ಸದಸ್ಯರಾದ ಸಿದ್ದರಾಜು ಮತ್ತು ಗೋ. ಮಧುಸೂದನ್ ಸೇರಿ ಒಟ್ಟು 73 ಮಂದಿ ಈ ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು. ಸಂಸದ ಎಚ್. ವಿಶ್ವನಾಥ್ ಮತ್ತು ವಿಧಾನ ಪರಿಷತ್ ಸದಸ್ಯ ನಾರಾಯಣಸ್ವಾಮಿ ಗೈರು ಹಾಜರಾಗಿದ್ದರು.