ಹಲವೆಡೆ ದಾಳಿ: ಮರಳು ಲಾರಿ ವಶ
ಕ.ಪ್ರ.ವಾರ್ತೆ ಟಿ.ನರಸೀಪುರ ಸೆ. 5
ಅಕ್ರಮ ಮರಳುಗಾರಿಕೆಗೆ ಕಡಿವಾಣ ಹಾಕಲು ಮುಂದಾಗಿರುವ ಪೊಲೀಸರು ಹಲವೆಡೆ ಕಾರ್ಯಾಚರಣೆ ನಡೆಸಿ 9 ಲೋಡ್ ಮರಳು, 5 ಕೊಪ್ಪರಿಕೆ, ಒಂದು ಟ್ರ್ಯಾಕ್ಟರ್ ಹಾಗೂ ಎರಡು ಲಾರಿಗಳನ್ನು ವಶಪಡಿಸಿಕೊಂಡಿದ್ದಾರೆ.
ಎಸ್‌ಐ ಕೆ.ಆರ್. ಗೋಪಿಕೃಷ್ಣ ನೇತೃತ್ವದ ಪೊಲೀಸರ ತಂಡ ತಾಲೂಕಿನ ಹಳೆ ಕೆಂಪಯ್ಯನಹುಂಡಿ ಗ್ರಾಮದ ಕಪಿಲಾ ನದಿ ಪಾತ್ರದಲ್ಲಿ ನಡೆಯುತ್ತಿದ್ದ ಅಕ್ರಮ ಗಣಿಗಾರಿಕೆ ಮೇಲೆ ದಾಳಿ ನಡೆಸಿ, ಸ್ಮಶಾನದಲ್ಲಿ ಸಂಗ್ರಹಿಸಿದ್ದ 9 ಲೋಡ್ ಮರಳನ್ನು ವಶಕ್ಕೆ ತೆಗೆದುಕೊಂಡಿತು. ಗಣಿಗಾರಿಕೆಗೆ ಬಳಸುವ 5 ಕೊಪ್ಪರಿಕೆ ನಾಶಪಡಿಸಿತು. ಸ್ಥಳದಲ್ಲೆ ಇದ್ದ ಟ್ರ್ಯಾಕ್ಟರ್‌ವೊಂದನ್ನು ವಶಪಡಿಸಿಕೊಂಡರು.
ನಂತರ ಇಂಡವಾಳು ಗ್ರಾಮದದಲ್ಲಿ ಅಕ್ರಮವಾಗಿ ಮರಳು ಸಾಗಣೆ ಮಾಡಲು ಅಣಿಯಾಗಿದ್ದ ಎರಡು ಲಾರಿಗಳನ್ನು ಪೊಲೀಸರು ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ.