ಜೇಡಿಮಣ್ಣಿನ ಗಣೇಶ ಖರೀದಿಸಲು ಮನವಿ
ಮೈಸೂರು: ಜೇಡಿ ಮಣ್ಣಿನಲ್ಲಿ ಮಾಡಿದ ಬಣ್ಣವಿಲ್ಲದ ಗಣೇಶ ವಿಗ್ರಹಗಳನ್ನು ಮಾತ್ರ ಸಾರ್ವಜನಿಕರು ಕೊಂಡುಕೊಳ್ಳುವಂತೆ ಕುಕ್ಕರಹಳ್ಳಿ ಕೆರೆ ಸಂರಕ್ಷಣಾ ಸಮಿತಿಯ ಸಂಚಾಲಕ ಕೆ.ಎಂ. ಜಯರಾಮಯ್ಯ ಮನವಿ ಮಾಡಿದ್ದಾರೆ. ಕಳೆದೆರಡು ವರ್ಷದಿಂದ ಗಣೇಶ ಹಬ್ಬಗಳಲ್ಲಿ ನಗರದಲ್ಲಿ ಸಾವಿರಾರು ಬಣ್ಣವಿಲ್ಲದ ಗಣೇಶ ವಿಗ್ರಹಗಳನ್ನು ಜನರು ಕೊಂಡುಕೊಂಡಿದ್ದು ಒಳ್ಳೆಯ ಸೂಚನೆಯಾಗಿದ್ದು, ಈ ವರ್ಷದ ಗಣೇಶ ಹಬ್ಬಕ್ಕೆ ಸಹ ಹೆಚ್ಚು ಜನರು ಬಣ್ಣವಿಲ್ಲದ ಗಣೇಶ ವಿಗ್ರಹಗಳನ್ನು ಕೊಂಡು ಪರಿಸರವನ್ನು ಸಂರಕ್ಷಿಸಬೇಕೆಂದು ಕೋರಿದ್ದಾರೆ.
ಪರಿಸರ ಸ್ನೇಹಿ ಗಣಪ ಮೂರ್ತಿ ಬಳಸಿ
ಮೈಸೂರು: ಮಣ್ಣಿನಿಂದ ತಯಾರಿಸಿದ ಪರಿಸರ ಸ್ನೇಹಿ ಬಣ್ಣದ ಗೌರಿ ಮತ್ತು ಗಣೇಶ ಮೂರ್ತಿಗಳನ್ನು ಬಳಸಲು ನಗರಪಾಲಿಕೆಯ ಆಯುಕ್ತ ಡಾ.ಎಂ.ಆರ್. ಮನವಿ ಮಾಡಿದ್ದಾರೆ. ಒಂದು ವೇಳೆ ಪ್ಲಾಸ್ಟರ್ ಆಫ್ ಪ್ಯಾರೀಸ್ ಮೂರ್ತಿಗಳನ್ನು ಮಾರಾಟ ಮಾಡುವುದು ಅಥವಾ ಸಾಗಿಸುತ್ತಿರುವುದು ಕಂಡು ಬಂದಲ್ಲಿ, ಇಂತಹ ಗೌರಿ ಗಣೇಶ ಮೂರ್ತಿಗಳನ್ನು ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಪಾಲಿಕೆಯಿಂದ ಜಪ್ತಿ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ದೇವರಾಜ್ ಆಯ್ಕೆ
ಮೈಸೂರು: ಮುಖ್ಯಪ್ರಾಣ ಸಾಂಸ್ಕೃತಿಕ ಅಕಾಡೆಮಿ ವತಿಯಿಂದ 2013ನೇ ಸಾಲಿನ ದೇಜಗೌ ಸಾಹಿತ್ಯ ಪ್ರಶಸ್ತಿಗೆ ವಿಜ್ಞಾನ ಕ್ಷೇತ್ರದಲ್ಲಿ ವಿಶಿಷ್ಟ ಸೇವೆ ಸಲ್ಲಿಸಿರುವ ವಿಜ್ಞಾನಿ ಸಾತನೂರು ದೇವರಾಜು ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಪ್ರಧಾನ ಕಾರ್ಯದರ್ಶಿ ಜಿ.ಪಿ. ಸಿದ್ದೇಗೌಡ ಹೇಳಿದ್ದಾರೆ.
ಕಸಾಯಿಖಾನೆ ಬಂದ್
ಮೈಸೂರು: ಗೌರಿ-ಗಣೇಶ ಹಬ್ಬದ ಅಂಗವಾಗಿ 2013ರ ಸೆ.9 ರಂದು ಮಾಂಸದ ವ್ಯಾಪಾರವನ್ನು ನಿಷೇಧಿಸಿದ್ದು, ಅಂದು ನಗರಪಾಲಿಕೆ ವ್ಯಾಪ್ತಿಗೊಳಪಡುವ ಕುರಿ, ಮೇಕೆ ಕಸಾಯಿಖಾನೆ ಮತ್ತು ಇತರೆ ಎಲ್ಲ ಮಾಂಸದ ಅಂಗಡಿಗಳನ್ನು ಮುಚ್ಚುವಂತೆ ನಗರಪಾಲಿಕೆ ಆರೋಗ್ಯಾಧಿಕಾರಿ ಆದೇಶಿಸಿದ್ದಾರೆ.