ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಡಾ. ಶಿವರಾತ್ರಿ ರಾಜೇಂದ್ರ ಶ್ರೀ ಗುಣಗಳ ಗಣಿ

Rashmi Kasaragodu
Updated On : 7 Sept 2013, 12:51 pm

ಕ.ಪ್ರ. ವಾರ್ತೆ, ಸುತ್ತೂರು, ಸೆ.6
ಸ್ವಾತಂತ್ರ್ಯ ಪೂರ್ವದಲ್ಲಿಯೇ ವಿದ್ಯಾರ್ಥಿನಿಲಯಗಳನ್ನು ತೆರೆಯುವ ಮೂಲಕ ಬಡ ವಿದ್ಯಾರ್ಥಿಗಳ ಪಾಲಿಗೆ ಭಾಗ್ಯದ ಬಾಗಿಲನ್ನು ತೆರೆದ ಡಾ.ಶಿವರಾತ್ರಿ ರಾಜೇಂದ್ರ ಸ್ವಾಮೀಜಿಗಳವರು ಗುಣಗಳ ಗಣಿಯಾಗಿದ್ದರು ಎಂದು ರಾಜಶ್ರೀ ಕನ್ಸ್ಟ್ರಕ್ಷನ್ನ ಮಂಜುನಾಥ್ ಶ್ರಾಫ್ ಬಣ್ಣಿಸಿದರು.
ಶಿಕ್ಷಣ ಸಮುಚ್ಚಯದಲ್ಲಿ ಏರ್ಪಡಿಸಿದ್ದ ಡಾ.ಶಿವರಾತ್ರಿ ರಾಜೇಂದ್ರ ಸ್ವಾಮೀಜಿಗಳವರ 98ನೇ ಜಯಂತಿ ಮಹೋತ್ಸವದ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು, ದಯೆ, ಕರುಣೆ, ಪ್ರೀತಿ, ವಾತ್ಸಲ್ಯ ಇವೇ ಮೊದಲಾದ ಮಾನವೀಯ ಮೌಲ್ಯಗಳ ಸಾಕಾರ ಮೂರ್ತಿಗಳಂತಿದ್ದ ಡಾ.ರಾಜೇಂದ್ರ ಶ್ರೀಗಳು, ಶರಣರ ದಾಸೋಹ ಮತ್ತು ಕಾಯಕ ತತ್ವಗಳನ್ನು ಮುನ್ನಡೆಸುವ ಮೂಲಕ ನಾಡುಕಟ್ಟುವ ಮಹತ್ತರ ಕಾರ್ಯದಲ್ಲಿ ತೊಡಗಿಸಿಕೊಂಡರು ಎಂದು ಸ್ಮರಿಸಿದರು. ತೇಜೂರು ಶ್ರೀಮಠದ ಕಲ್ಯಾಣ ಸ್ವಾಮೀಜಿಗಳವರು ಸಮ್ಮುಖ ವಹಿಸಿ ಆಶೀರ್ವಚನ ನೀಡಿ, ಜನಸಾಮಾನ್ಯರ ಕಷ್ಟಕಾರ್ಪಣ್ಯಗಳನ್ನು ನೀಗಿಸಲು ಸದಾ ಚಿಂತಿಸಿದ ರಾಜೇಂದ್ರ ಶ್ರೀಗಳನ್ನು ಸದಾ ಸ್ಮರಿಸುವುದು ನಮ್ಮ ಕರ್ತವ್ಯ. ಸುತ್ತೂರು ಶ್ರೀಮಠವು ಇಂದು ವಿಶ್ವವಿಖ್ಯಾತವಾಗಲು ಪೂಜ್ಯರ ತ್ಯಾಗ ಮತ್ತು ತಪಸ್ಸಿನ ಫಲ ಹಾಗೂ ಸಮಾಜಮುಖಿ ಚಿಂತನೆಗಳೆ ಕಾರಣ ಎಂದು ಹೇಳಿದರು.
ಪ್ರಕಾಶಕ ಡಿ.ಎನ್. ಲೋಕಪ್ಪ ನುಡಿನಮನ ಸಲ್ಲಿಸಿ ಮಾತನಾಡಿ, ಸಮಾಜದ ಅಭಿವೃದ್ಧಿಗಾಗಿ ತಮ್ಮ ಬದುಕನ್ನೆ ಮುಡುಪಾಗಿಟ್ಟ ಡಾ.ರಾಜೇಂದ್ರ ಸ್ವಾಮೀಜಿಗಳವರನ್ನು ಸ್ಮರಿಸಿಕೊಳ್ಳುವುದೆ ಪುಣ್ಯದ ಕೆಲಸ ಎಂದು ಕೊಂಡಾಡಿದರು. ಎಸ್. ಶಿವಸ್ವಾಮಿಯವರು ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ವಿತರಿಸಿದರು.
ಸಂಯೋಜನಾಧಿಕಾರಿ ಜಿ.ಎಲ್. ತ್ರಿಪುರಾಂತಕ ಶಿಕ್ಷಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಜೆಎಸ್ಎಸ್ ಸಂಸ್ಥೆಗಳ ಗೌರವ ಸಹಾಯಕ ಆಡಳಿತಾಧಿಕಾರಿಗಳಾದ ಎಸ್.ಪಿ. ಉದಯಶಂಕರ್, ವಿದ್ಯಾ ಮಂಜುನಾಥ್ ಹಾಗೂ ಜೆಎಸ್ಎಸ್ ಕೃಷಿ ವಿಜ್ಞಾನ ಕೇಂದ್ರದ ಕಾರ್ಯಕ್ರಮ ಸಂಯೋಜಕ ಡಾ.ಅರುಣ್ ಬಳಮಟ್ಟಿ, ಸಂಸ್ಥೆಯ ಮುಖ್ಯಸ್ಥರು ಪಾಲ್ಗೊಂಡಿದ್ದರು.
ಶಾಲಾ ಮಕ್ಕಳು ಪ್ರಾರ್ಥಿಸಿದರು. ಎಸ್. ಸತೀಶ್ ಸ್ವಾಗತಿಸಿದರು. ಎಚ್.ವಿ. ದಿವ್ಯಾ ವಂದಿಸಿದರು. ಚಂದ್ರಶೇಖರ್ ಎಸ್. ಕಳ್ಳಿಮನಿ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement