ಪ್ರಾದೇಶಿಕ ಪಕ್ಷದ ಆಶಯದಿಂದ ಕೆಜೆಪಿ ಸೇರಿದೆ
ಕ.ಪ್ರ.ವಾರ್ತೆ ಮೈಸೂರು ಸೆ.6
ಪ್ರಾದೇಶಿಕ ಪಕ್ಷದ ಅಗತ್ಯತೆ ಮನಗಂಡು ಕೆಜೆಪಿ ಸೇರಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಪ್ರೊ.ಚಂದ್ರಶೇಖರ್ ಪಾಟೀಲ ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಸಹಯೋಗದಲ್ಲಿ ಶುಕ್ರವಾರ ಏರ್ಪಡಿಸಿದ್ದ ಮುಕ್ತ ಸಂವಾದದಲ್ಲಿ ಅವರು ಮಾತನಾಡಿದರು.
ಕರ್ನಾಟಕಕ್ಕೆ ಪ್ರಾದೇಶಿಕ ಪಕ್ಷದ ಅಗತ್ಯವಿದ್ದು, ಅದರಂತೆ ದೇವರಾಜ ಅರಸು ಸೇರಿದಂತೆ ಅನೇಕರು ಪಕ್ಷಗಳನ್ನು ಕಟ್ಟಿದ್ದು ತಿಳಿದ ಸಂಗತಿ. ಈಗಿನ ಸಂದರ್ಭದಲ್ಲಿ ನನ್ನ ಮುಂದೆ ಜೆಡಿಎಸ್, ಬಿಎಸ್ಆರ್ ಕಾಂಗ್ರೆಸ್ ಹಾಗೂ ಕೆಜೆಪಿ ಇತ್ತು. ಇದರಲ್ಲಿ ಕೆಜೆಪಿಗೆ ಯಡಿಯೂರಪ್ಪ ಅವರು ಆಹ್ವಾನ ನೀಡಿದ್ದರಿಂದ ನಾನು ಆ ಪಕ್ಷ ಸೇರಿದೆ. ಜೆಡಿಎಸ್ ಪಕ್ಷದ ಮುಖಂಡರು ಆಹ್ವಾನಿಸಿದ್ದರೆ ಸೇರಬಹುದಾಗಿತ್ತು ಎಂದರು.
ಕೆಜೆಪಿ ಸಲಹಾ ಸಮಿತಿಗೆ ಸದಸ್ಯರಾಗಲು ಅನಂತಮೂರ್ತಿ, ಹಂಪನಾ, ನಲ್ಲೂರು ಪ್ರಸಾದ್ ಅವರೂ ಒಪ್ಪಿಗೆ ಸೂಚಿಸಿದ್ದರಂತೆ. ಆದರೆ ಅವರು ಪಕ್ಷದಲ್ಲಿ ಕಾಣಿಸುತ್ತಿಲ್ಲ. ನಾನು ಮಾತ್ರ ಪಕ್ಷದ ಸದಸ್ಯನಾಗಿ ಉಳಿದಿದ್ದೇನೆ. ಜೀವ ಇರುವವರಿಗೂ ಬಿಜೆಪಿಗೆ ಯಡಿಯೂರಪ್ಪ ಹೋಗುವುದಿಲ್ಲ ಎಂದಿದ್ದಾರೆ. ಬಿಜೆಪಿ ರಾವಣರೂ ಕರೆಯುತ್ತಿದ್ದು, ಹೋಗಲೋ ಬೇಡವೋ ಎಂದು ಎರಡು ಮನಸ್ಸಿರುವ ಯಡಿಯೂರಪ್ಪ ಅವರ ಸ್ಥಿತಿ ಸೀತೆಯಂತಾಗಿದೆ ಎಂದರು.
ಸಾಹಿತಿಗಳನ್ನು ಬೆಳೆಸಿದರು: ಮುಖ್ಯ ಅತಿಥಿಯಾಗಿ ಮಾತನಾಡಿದ ಬಂಡಾಯ ಕವಿ ಡಾ. ಸರಜೂ ಕಾಟ್ಕರ್, ಉತ್ತರ ಕರ್ನಾಟಕದಲ್ಲಿ ಅರಿವಿನ ಬೀಜ ಬಿತ್ತುವಲ್ಲಿ ಚಂಪಾ ಅವರ ಪಾತ್ರ ಬಹುಮುಖ್ಯ. ತಮ್ಮ ಸಂಕ್ರಮಣ ಪತ್ರಿಕೆ ಮೂಲಕ ಅನೇಕ ಸಾಹಿತಿಗಳನ್ನು ಬೆಳೆಸಿದವರು. ಅಧ್ಯಾಪಕರಾಗಿ ಶಿಷ್ಯರನ್ನು ತುಂಬ ಪ್ರೋತ್ಸಾಹಿಸಿದವರು. ಇಂಗ್ಲೆಂಡಿನಲ್ಲಿರುವ ವೈಜ್ಞಾನಿಕತೆ ಭಾರತಕ್ಕೆ ಯಾಕಿಲ್ಲ ಎಂದು ಪ್ರತಿಪಾದಿಸಿದವರು ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಜಾನಪದ ವಿದ್ವಾಂಸ ಹಾಗೂ ಚಿಂತಕ ಪ್ರೊ.ಕಾಳೇಗೌಡ ನಾಗವಾರ, ಪ್ರಜಾಪ್ರಭುತ್ವದ ತ್ರಾಣವೇ ಮುಕ್ತ ಸಂವಾದ. ಯಾರೂ ಪ್ರಶ್ನಾತೀತರಲ್ಲ. ನ್ಯಾಯಾಲದ ಕಟ್ಟಕಟ್ಟೆಯಲ್ಲಿ ನಿಲ್ಲಿಸಿ ಪ್ರಶ್ನಿಸಬೇಕು. ತಕ್ಕ ಉತ್ತರ ಪಡೆಯುವಂತಾಗಬೇಕು. ಅಂಬೇಡ್ಕರ್, ಲೋಹಿಯಾ, ಕುವೆಂಪು ಅವರಂತೆ ಆರೋಗ್ಯಕರ ಸಮಾಜ ಕಟ್ಟುವಲ್ಲಿ ಚಂಪಾ ಅವರ ಕಾಳಜಿ ಅನನ್ಯ ಎಂದರು. ಪರಿಷತ್ ಅಧ್ಯಕ್ಷ ಎಂ. ಚಂದ್ರಶೇಖರ್ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಡಾ. ವೈ.ಡಿ ರಾಜಣ್ಣ ನಿರೂಪಿಸಿದರು.