ಶಾಸ್ತ್ರೀಯ ಕಲೆಗಳಿಗೆ ಹೊಡೆತ ಬೀಳುತ್ತಿದೆ
ಕ.ಪ್ರ. ವಾರ್ತೆ ಮೈಸೂರು ಸೆ.6
ಮೈಸೂರನ್ನು ಸಾಂಸ್ಕೃತಿಕ ನಗರಿ ಎಂದು ಕರೆಯುತ್ತೇವೆ. ಆದರೆ ಇಲ್ಲಿಯೂ ಶಾಸ್ತ್ರೀಯ ಕಲೆಗಳಿಗೆ ಹೊಡೆತ ಬೀಳುತ್ತಿದೆ ಎಂದು ಸಂಗೀತ ಮತ್ತು ನೃತ್ಯ ಅಕಾಡೆಮಿ ಮಾಜಿ ಅಧ್ಯಕ್ಷೆ ವೈಜಯಂತಿ ಕಾಶಿ ಆತಂಕ ವ್ಯಕ್ತಪಡಿಸಿದರು.
ಕುಮಾರ್ ಪ್ರದರ್ಶಕ ಕಲೆಗಳ ಕೇಂದ್ರವು ನಗರದ ವೀಣೆ ಶೇಷಣ್ಣ ಭವನದಲ್ಲಿ ಏರ್ಪಡಿಸಿದ್ದ ರಾಷ್ಟ್ರೀಯ ನಾದ ನೃತ್ಯೋತ್ಸವದ ಸಮಾರೋಪ ಸಮಾರಂಭದಲ್ಲಿ ಮಾತೃಶ್ರೀ ಮುದ್ದಮ್ಮ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ರಾಷ್ಟ್ರೀಯ ನಾದ ನೃತ್ಯೋತ್ಸವ ಪ್ರೇಕ್ಷಕರಿಲ್ಲದೆ ಬಣಗುಡುತ್ತಿದೆ. ಇದರಿಂದ ಕಲಾವಿದರು ತಮ್ಮನ್ನೇ ತಾವೇ ಪ್ರಶ್ನಿಸಿಕೊಳ್ಳುವ ಸಂದೇಶ ಇಲ್ಲಿಂದ ರವಾನೆಯಾಗುತ್ತಿದೆಯೇನೋ ಎಂದರು.
ಬೆಂಗಳೂರು ಮೆಟ್ರೋಪಾಲಿಟನ್ ಸಿಟಿ. ಅಲ್ಲಿ ಶಾಸ್ತ್ರೀಯ ಕಲೆಗಳನ್ನು ಪ್ರದರ್ಶಿಸಿದರೆ ಪ್ರೇಕ್ಷಕರು ಬರುವುದು ಕಷ್ಟ. ಮೈಸೂರು ಸಾಂಸ್ಕೃತಿಕ ಹಿನ್ನೆಲೆ ಹೊಂದಿದ್ದರೂ ಇಲ್ಲಿನ ಪ್ರೇಕ್ಷಕರು ಉತ್ಸಾಹ ಕಳೆದುಕೊಂಡಿದ್ದಾರೆ ಎಂಬುದು ಗೊತ್ತಾಗುತ್ತಿದೆ. ಹೀಗಾಗಿ ಕಲಾವಿದರಾದ ನಾವು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ಕಲಾವಿದ ಹೆಚ್ಚು ಕಾಲ ನಿಷ್ಠೆಯಿಂದ ಅಭ್ಯಾಸ ಮಾಡಿ ಪ್ರತಿಭೆ ಪ್ರದರ್ಶಿಸಿದರೆ ಅದನ್ನು ಪ್ರೇಕ್ಷಕರು ನೋಡಿ ಆನಂದಿಸುವ ಕಾಲ ಬರಲಿ ಎಂದು ಅವರು ಆಶಿಸಿದರು. ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಸ್.ಎಂ. ಮಾಲೇಗೌಡ ಮಾತನಾಡಿ, ಸಂಗೀತದಿಂದ ನರರೋಗಳನ್ನು ನಿವಾರಣೆ ಮಾಡಬಹುದು. ಅಂತಹ ಸಾಧನೆಯನ್ನು ಡಾ.ಅನಿಲ್ ಸಾಂಗ್ಲಿ ಮಾಡಿದ್ದಾರೆ. ಪ್ರೇಕ್ಷಕರು ಕಡಿಮೆಯಾಗುತ್ತಿರುವುದು ಚಿಂತಸಬೇಕಾದ ವಿಷಯವಾದರೂ, ಇಲ್ಲಿಗೆ ಆಗಮಿಸಿರುವ ಪ್ರೇಕ್ಷಕರಲ್ಲಿನ ಉತ್ಸಾಹ ನೋಡಿ ಸಂತೋಷವಾಗುತ್ತಿದೆ. ಇನ್ನು ಮುಂದಾದರೂ ಪ್ರೇಕ್ಷಕರ ಸಂಖ್ಯೆ ಹೆಚ್ಚಾಗಲಿ ಎಂದು ಹಾರೈಸಿದರು.
ಕುಮಾರ್ ಪ್ರದರ್ಶಕ ಕಲೆಗಳ ಕೇಂದ್ರದ ನಿರ್ದೇಶಕ ಕೆ.ಕುಮಾರ್, ದಿವಾಕರ್ ಇದ್ದರು. ನಂತರ ಕೆ.ಎಂ. ಲೇಖ, ಕೆ.ಎಂ. ನಿಧಿ ಭರತನಾಟ್ಯ ಹಾಗೂ ವೈಜಯಂತಿ ಕಾಶಿ ಅವರ ಪುತ್ರಿ ಪ್ರತೀಕ್ಷಾ ಕಾಶಿ ಕುಚುಪುಡಿ ನೃತ್ಯ ಪ್ರದರ್ಶಿಸಿದರು.