ಸಾರ್ವಜನಿಕ ಆಡಳಿತ ಪ್ರವೇಶಾತಿಗೆ ಒತ್ತಾಯಿಸಿ ಧರಣಿ
ಕ.ಪ್ರ. ವಾರ್ತೆ ಮೈಸೂರು ಸೆ.6
ಮಹಾರಾಣಿ ಕಾಲೇಜಿನಲ್ಲಿ ಸಾರ್ವಜನಿಕ ಆಡಳಿತಕ್ಕೆ ಪ್ರವೇಶಾವಕಾಶ ನೀಡಬೇಕು ಎಂದು ಒತ್ತಾಯಿಸಿ ಸ್ನಾತಕೋತ್ತರ ವಿದ್ಯಾರ್ಥಿನಿಯರು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟಿಸಿದರು. 2008ರಲ್ಲಿ ಮಹಾರಾಣಿ ಕಲಾ ಕಾಲೇಜಿನಲ್ಲಿ ಸಾರ್ವಜನಿಕ ಆಡಳಿತ ಆರಂಭಿಸಿದಾಗ ಉಪನ್ಯಾಸಕರೆಲ್ಲರೂ ಭವಿಷ್ಯವಿದೆ ಎಂದು ಹೇಳಿ ವಿದ್ಯಾರ್ಥಿನಿಯರನ್ನು ಬಲವಂತವಾಗಿ ಸಾರ್ವಜನಿಕ ಆಡಳಿತಕ್ಕೆ ಸೇರಿಸಿದರು. ಆದರೆ 2012-13ನೇ ಸಾಲಿನಲ್ಲಿ ರಾಜ್ಯಶಾಸ್ತ್ರ (ಸ್ನಾತಕೋತ್ತರ) ಆರಂಭವಾದ ಮೇಲೆ ಸಾರ್ವಜನಿಕ ವಿಷಯವನ್ನು ಕೀಳಾಗಿ ಕಾಣಲಾಗುತ್ತಿದೆ. ಅಲ್ಲದೆ 2013-14ನೇ ಸಾಲಿಗೆ ಪ್ರವೇಶಾತಿ ನೀಡಲು ನಿರಾಕರಿಸಲಾಗುತ್ತಿದೆ ಎಂದು ವಿದ್ಯಾರ್ಥಿನಿಯರು ಆರೋಪಿಸಿದರು. ಪ್ರಸಕ್ತ ಶೈಕ್ಷಣಿಕ ಸಾಲಿಗೆ ಹಿಂದಿನ ವಿದ್ಯಾರ್ಥಿಗಳಲ್ಲದೆ ಹೊಸದಾಗಿ 15 ಮಂದಿ ವಿದ್ಯಾರ್ಥಿನಿಯರು ಸ್ವ ಇಚ್ಛೆಯಿಂದ ಪ್ರವೇಶಾತಿ ಬಯಸಿ ಬಂದರೂ ಕೊಠಡಿ ಇಲ್ಲ, ಉಪನ್ಯಾಸಕರಿಲ್ಲ ಎಂಬ ನೆಪ ಹೇಳಲಾಗುತ್ತಿದೆ. ಅಲ್ಲದೆ ಕುಲಪತಿಯಿಂದ ಅನುಮತಿ ಪತ್ರ ತಂದರೆ ಪ್ರವೇಶಾತಿ ನೀಡುವುದಾಗಿ ಹೇಳುತ್ತಿದ್ದಾರೆ. ಆದರೆ ಕುಲಪತಿ ಅನುಮತಿ ಪತ್ರ ನೀಡಿದರೂ ಯಾವುದೆ ಪ್ರಯೋಜನವಾಗಿಲ್ಲ ಎಂದು ದೂರಿದರು. ಕೂಡಲೆ ಸಾರ್ವಜನಿಕ ಆಡಳಿತ ವಿಷಯಕ್ಕೆ ಪ್ರವೇಶಾತಿ ನೀಡದಿದ್ದರೆ ಮಹಿಳಾ ಆಯೋಗ ಮತ್ತು ಇತರ ಮಹಿಳಾ ಸಂಘಟನೆ ಜತೆಗೂಡಿ ಉಪವಾಸ ಸತ್ಯಗ್ರಹ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ. ಪ್ರತಿಭಟನೆಯಲ್ಲಿ ಎಚ್.ಎಸ್. ಮೇಘನಾ ಮತ್ತು ಆರ್. ವೀಣಾ ಇದ್ದರು.