ಸ್ವಂತ ಸೂರಿಲ್ಲದೆ ಬೀದಿಗೆ ಬಿದ್ದ ಕೊರಚರು
ಕ.ಪ್ರ. ವಾರ್ತೆ ಟಿ. ನರಸೀಪುರ ಸೆ.6
ವಾಸಿಸಲು ಸ್ವಂತ ಸೂರಿಲ್ಲ, ಹೋಗಲಿ ತಮ್ಮದು ಅಂತಾ ನಿವೇಶನವೂ ಇಲ್ಲವೇ ಇಲ್ಲ. ಕೊಳಚೆ ನೀರಿನ ನಡುವೆಯೇ ನಿತ್ಯದ ಜೀವನ ಸಾಗಿದೆ.
ಪಟ್ಟಣದಲ್ಲಿ ಬರೋಬ್ಬರಿ ಎರಡೂವರೆ ದಶಕಗಳಿಂದ ನಿವೇಶನವಾಗಲಿ, ಮನೆಯಾಗಲಿ ಇಲ್ಲದೆ ಕೊಳಚೆ ನೀರಿನ ನಡುವೆ ಕೊರಚ ಸಮುದಾಯ ಬದುಕುತ್ತಿದೆ. ದಾವಣಗೆರೆಯಿಂದ ವಲಸೆ ಬಂದ ಪ.ಜಾತಿಯ ಕೊರಚ ಸಮುದಾಯಕ್ಕೆ ಸೇರಿದ 30 ಕುಟುಂಬಗಳು ಯಾವುದೆ ನಾಗರಿಕ ಮೂಲ ಸೌಲಭ್ಯಗಳಿಲ್ಲದೆ ಬದಕನ್ನು ಸವೆಸುತ್ತಿವೆ.
ರಾಷ್ಟ್ರೀಯ ಹೆದ್ದಾರಿ 212ರ ನೂತನ ಸೇತುವೆ ಬದಿಯ ಖಾಸಗಿ ನಿವೇಶನದಲ್ಲಿ ನೆಲ ಬಾಡಿಗೆ ಪಾವತಿಸಿ ಪುಟ್ಟ ಗುಡಿಸಲು ಹಾಗೂ ಜೋಪಡಿಗಳನ್ನು ಕಟ್ಟಿಕೊಂಡು ಕೊರಚ ಜನರು ವಾಸಿಸುತ್ತಿದ್ದಾರೆ. ಪಪಂ ವ್ಯಾಪ್ತಿಯ ಮತದಾರರಾಗಿರುವ ಇವರಿಗೆ ನಾಗರಿಕ ಸೌಲಭ್ಯವಿರಲಿ, ನಿಲ್ಲಲು ಸಿಗಬೇಕಾದ ನೆಲೆ, ವಾಸಿಸಲು ಮನೆ ಎಂಬುದು ಮರೀಚಿಕೆಯಾಗಿದೆ.
ಕಳೆದ ಗುರುವಾರ ರಾತ್ರಿಯಿಡಿ ಸುರಿದ ಧಾರಾಕಾರ ಮಳೆಗೆ ಕೊರಚ ಸಮುದಾಯದ ಕುಟುಂಬಗಳು ವಾಸಿಸುವ ಜಾಗದ ತುಂಬೆಲ್ಲಾ ಕೊಚ್ಚೆ ನೀರು ತುಂಬಿ ಹೋಗಿದೆ.
ಡಿಸಿ ಕಚೇರಿ ಮುಂದೆ ಗುಡಿಸಲು ಚಳವಳಿ: ಪಟ್ಟಣದ ಕೊಳಚೆ ನೀರಿನ ನಡುವೆ ಜೀವನ ನಡೆಸುತ್ತಿರುವ ಕೊರಚ ಸಮುದಾಯದ ಕುಟುಂಬಗಳಿಗೆ ಜಿಲ್ಲಾಡಳಿತ ಪಟ್ಟಣ ವ್ಯಾಪ್ತಿಯಲ್ಲಿ ನಿವೇಶನ ಹಾಗೂ ವಸತಿ ಸೌಲಭ್ಯ ಕಲ್ಪಿಸಿಕೊಡದಿದ್ದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಗುಡಿಸಲು ನಿರ್ಮಿಸುವ ಮೂಲಕ ವಿನೂತನ ಚಳವಳಿ ನಡೆಸುವುದಾಗಿ ದಸಂಸ ಜಿಲ್ಲಾ ಸಂಘಟನಾ ಸಂಚಾಲಕ ಆಲಗೂಡು ಶಿವಕುಮಾರ್ ಹೇಳಿದರು.
ಕಳೆದ 25 ವರ್ಷಗಳಿಂದಲೂ ನರಸೀಪುರದಲ್ಲಿ ವಾಸಿಸುತ್ತಿರುವ ಕೊರಚರಿಗೆ ಇದುವರೆಗೂ ಸ್ಥಳೀಯ ಪಪಂ ಅಥವಾ ತಾಲೂಕು ಆಡಳಿತ ನಿವೇಶನ ಹಾಗೂ ವಸತಿ ಸೌಲಭ್ಯ ಕಲ್ಪಿಸಿಕೊಡಬೇಕು ಎಂಬ ಕನಿಷ್ಠ ಕಾಳಜಿ ತೋರಿಸಿಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ದೂರಿದರು.
ಕೊರಚ ಕುಟುಂಬಗಳಿಗೆ ನಿವೇಶನ ಹಾಗೂ ವಸತಿ ಸೌಲಭ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಗುಡಿಸಲು ನಿರ್ಮಿಸಿ ವಿನೂತನ ರೀತಿಯಲ್ಲಿ ಕೊರಚ ಕುಟುಂಬಗಳೊಂದಿಗೆ ಪ್ರತಿಭಟಿಸುವುದಾಗಿ ತಿಳಿಸಿದರು. ಮುಖಂಡರಾದ ಯಡದೊರೆ ಮಹದೇವಯ್ಯ, ಸೋಸಲೆ ಶಿವಣ್ಣ, ಹಿರಿಯೂರು ಸೋಮಣ್ಣ ಇದ್ದರು.