11ರಂದು ಒಲಿಂಪಿಯಾಡ್
ಮೈಸೂರು: ಭಾರತೀಯ ಭೂ ವಿಜ್ಞಾನ ಸೊಸೈಟಿ ವತಿಯಿಂದ ಸೆ.11 ರಿಂದ 19 ರವರೆಗೆ ಮೈಸೂರಿನ ಇನ್ಫೋಸಿಸ್ ಆವರಣದಲ್ಲಿ 7ನೇ ಅಂತಾರಾಷ್ಟ್ರೀಯ ಭೂ ವಿಜ್ಞಾನ ಒಲಿಂಪಿಯಾಡ್ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಮೈಸೂರು ವಿವಿ ಭೂ ವಿಜ್ಞಾನ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಡಾ.ಎಂ. ಶಂಕರ್ ತಿಳಿಸಿದರು. ಸೆ. 12ರ ಬೆಳಗ್ಗೆ 10ಕ್ಕೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಎಚ್.ಕೆ. ಪಾಟೀಲ್ ಅವರು ಕಾರ್ಯಕ್ರಮ ಉದ್ಘಾಟಿಸುವರು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು. ಭೂ ವಿಜ್ಞಾನ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆ ಆಯೋಜಿಸಲಾಗುತ್ತದೆ. 25 ದೇಶಗಳಿಂದ 85 ವಿದ್ಯಾರ್ಥಿಗಳು, 65 ಪ್ರತಿನಿಧಿಗಳು ಭಾಗವಹಿಸುವ ನಿರೀಕ್ಷೆ ಇದೆ. ಕಾರ್ಯಕ್ರಮಕ್ಕೆ ಆಗಮಿಸುವ ವಿದ್ಯಾರ್ಥಿಗಳು ಮತ್ತು ಪ್ರತಿನಿಧಿಗಳು ಮೈಸೂರಿನ ಸ್ಥಳೀಯ ಶಾಲೆಗಳಿಗೆ ಭೇಟಿ ನೀಡಿ, ಭೂ ವಿಜ್ಞಾನ ಕುರಿತು ಚರ್ಚೆ, ಸಂವಾದ ನಡೆಸಲಿದ್ದಾರೆ. ಬಿಡುವಿನ ವೇಳೆಯಲ್ಲಿ ಪ್ರವಾಸಿ ತಾಣಗಳಿಗೆ ಭೇಟಿ ನೀಡಲಿದ್ದಾರೆ ಎಂದರು. ಮೈಸೂರು ವಿವಿ ಭೂ ವಿಜ್ಞಾನ ಅಧ್ಯಯನ ವಿಭಾಗದ ಪ್ರಾಧ್ಯಾಪಕರಾದ ಡಾ.ಬಿ. ಬಸವಲಿಂಗು, ಡಾ. ಪ್ರಕಾಶ್ ನರಸಿಂಹ, ವಿಜ್ಞಾನ ಲೇಖಕಿ ಶ್ರೀಮತಿ ಹರಿಪ್ರಸಾದ್ ಇದ್ದರು.