'ಗುರಿ ಸಾಧನೆಗಾಗಿ ಸನ್ಮಾರ್ಗದಲ್ಲಿ ಸಾಗಿ'
ಕ.ಪ್ರ. ವಾರ್ತೆ ಮೈಸೂರು ಸೆ. 7
ಜೀವನಕ್ಕೆ ನಿರ್ದಿಷ್ಟವಾದ ಧ್ಯೇಯ ಮತ್ತು ಗುರಿ ಇರಬೇಕು. ಆ ಗುರಿ ಸಾಧನೆಗಾಗಿ ಸನ್ಮಾರ್ಗದಲ್ಲಿ ಸಾಗಬೇಕು. ಡಾ. ಶಿವರಾತ್ರಿ ರಾಜೇಂದ್ರ ಸ್ವಾಮೀಗಳ ಆದರ್ಶ ನೆನೆದು ನಡೆದರೆ ಜೀವನ ಸಾರ್ಥಕವಾಗುತ್ತದೆ ಎಂದು ಅರಮನೆ ಜಪದಕಟ್ಟೆ ಮಠದ ಡಾ. ಮುಮ್ಮಡಿ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಊಟಿ ರಸ್ತೆಯಲ್ಲಿರುವ ಜೆಎಸ್ಎಸ್ ಕಲಾ, ವಾಮಿಜ್ಯ ಮತ್ತು ವಿಜ್ಞಾನ ಕಾಲೇಜಿನಲ್ಲಿ ಜರುಗಿದ ಡಾ. ಶಿವರಾತ್ರಿ ರಾಜೇಂದ್ರ ಸ್ವಾಮೀಗಳ 98ನೇ ಜಯಂತಿ ಮಹೋತ್ಸವದಲ್ಲಿ ಆಶೀರ್ವಚನ ನೀಡಿದ ಅವರು, ಪರೋಪಕಾರಮಿದಂ ಶರೀರಂ ಎಂಬ ಮಹಾವಾಣಿಗೆ ಅನ್ವರ್ಥವೆಂಬಂತೆ ರಾಜೇಂದ್ರ ಸ್ವಾಮೀಜಿ ಬದುಕಿದರು. ತುಂಬಾ ಕಷ್ಟದ ಕಾಲದಲ್ಲಿ ವಸತಿನಿಲಯ, ಶಿಕ್ಷಣ ಸಂಸ್ಥೆ ಸ್ಥಾಪಿಸಿ, ಕಡು ಬಡವರಿಗೆ ದಾರಿದೀಪವಾದರು. ಅವರ ಕೃಪೆಯಲ್ಲಿ ಬೆಳೆದವರು ಸುಸಂಸ್ಕೃತರಾಗಿದ್ದಾರೆ. ಸಂಸ್ಕಾರವಂತರಾಗಲು ಅಂತಹ ಗುರುವಿನ ಮಾರ್ಗದರ್ಶನ ಅಗತ್ಯ ಎಂದು ತಿಳಿಸಿದರು.
ಜೆಎಸ್ಎಸ್ ಮಹಾವಿದ್ಯಾಪೀಠದ ಕಾಲೇಜು ಶಿಕ್ಷಣ ವಿಭಾಗದ ನಿರ್ದೇಶಕ ಪ್ರೊ. ಟಿ.ಡಿ. ಸುಬ್ಬಣ್ಣ ಅಧ್ಯಕ್ಷತೆ ವಹಿಸಿ ಮಾತನಾಡಿ, ರಾಜೇಂದ್ರ ಸ್ವಾಮೀಗಳ ಮಾತೃ ಹೃದಯದ ವಾತ್ಸಲ್ಯದಲ್ಲಿ ಲಕ್ಷಾಂತರ ಮಂದಿ ಬೆಳಕು ಕಂಡಿದ್ದಾರೆ. ಪೂಜ್ಯರು ಕಂಡ ಕನಸು, ಅವರು ಹೊಂದಿದ್ದ ಆದರ್ಶ ಪ್ರಪಂಚಕ್ಕೆ ಆದರ್ಶಪ್ರಾಯವಾದುದು ಎಂದು ಹೇಳಿದರು.
ಮಹೋತ್ಸವ ಅಂಗವಾಗಿ ನಡೆದ ವಿವಿಧ ಸಾಂಸ್ಕೃತಿಕ ಮತ್ತು ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ಮತ್ತು ಪಾರಿತೋಷಕ ವಿತರಿಸಿದರು. ಕಳೆದ ಸಾಲಿನಲ್ಲಿ ಪದವಿ ಮತ್ತು ಪದವಿಪೂರ್ವ ಪರೀಕ್ಷೆಗಳಲ್ಲಿ ಅದ್ವಿತೀಯ ಸಾಧನೆ ಮಾಡಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ದತ್ತಿ ಪುರಸ್ಕಾರ ನೀಡಲಾಯಿತು.
ಕಾಲೇಜಿನ ಪ್ರಾಂಶುಪಾಲ ಪ್ರೊ. ಬಿ.ವಿ. ಸಾಂಬಶಿವಯ್ಯ ಸ್ವಾಗತಿಸಿದರು. ಮಾನಸ ಮತ್ತು ಅನುಷ ಪ್ರಾರ್ಥಿಸಿದರು. ಪ್ರಾಂಶುಪಾಲ ಎಸ್. ಸೋಮಶೇಖರ ವಂದಿಸಿದರು. ಪ್ರೊ. ಪಿ.ಎಂ. ಮಹದೇವಸ್ವಾಮಿ ನಿರೂಪಿಸಿದರು.