ರಾಜ್ಯದ ವಸತಿ ಶಾಲೆಗಳಿಗೆ ಕಾಯಕಲ್ಪ
ಕ.ಪ್ರ.ವಾರ್ತೆ ನಂಜನಗೂಡು ಸೆ. 7
ರಾಜ್ಯದ ವಸತಿ ಶಾಲೆಗಳ ಬಗ್ಗೆ ವ್ಯಾಪಕ ದೂರು ಕೇಳಿ ಬರುತ್ತಿರವ ಹಿನ್ನೆಲೆಯಲ್ಲಿ ಶಾಲೆಗಳ ಅಭಿವೃದ್ಧಿಗೆ ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡಲಿದೆ ಎಂದು ಸಮಾಜ ಕಲ್ಯಾಣ ಸಚಿವ ಎಚ್. ಆಂಜನೇಯ ತಿಳಿಸಿದರು.
ತಾಲೂಕಿನ ಹುರ ಗ್ರಾಮದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಪ. ವರ್ಗ ಬಾಲಕಿಯರ ವಸತಿ ಶಾಲೆಯ ನೂತನ ಕಟ್ಟಡವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು.
ಕಳೆದ 10 ವರ್ಷದಿಂದ ವಸತಿನಿಲಯಗಳ ಸಮಸ್ಯೆ ಇದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಪ್ರಾಮಾಣಿಕ, ಜನಪರ, ಭ್ರಷ್ಟರಹಿತ ಆಡಳಿತ ನೀಡಲು ಬದ್ಧವಾಗಿದ್ದು, ಆಯವ್ಯಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಾವಿರಾರು ಕೋಟಿ ರು. ಅನುದಾನ ನೀಡಿರುವುದಾಗಿ ತಿಳಿಸಿದರು.
ಸರ್ಕಾರದ ಸವಲತ್ತನ್ನು ಮಕ್ಕಳಿಗೆ ತಲುಪಿಸಬೇಕು. ಸಿಬ್ಬಂದಿ, ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಹಾಗೂ ದಾಸೋಹ ನೀಡುವಲ್ಲಿ ವಿಫಲವಾದರೆ ಸರ್ಕಾರ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಿದೆ. ನಾನೂ ಬಡತನದ ಬೇಗೆಯಿಂದ ಬಂದಿದ್ದೇನೆ. ಈಗ ನನಗೆ ಬಡವರಿಗೆ ಸಹಾಯ ಮಾಡಿಕೊಡುವ ಅವಕಾಶ ಸಿಕ್ಕಿದೆ. ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಪ್ರವಾಸ ಮಾಡಿ ಎಲ್ಲಾ ವಸತಿ ಶಾಲೆಗಳಿಗೆ ಭೇಟಿ ನೀಡಿ ಅಭಿವೃದ್ಧಿಗೆ ಶ್ರಮಿಸುವುದಾಗಿ ಹೇಳಿದರು.
ಸಂಸದ ಆರ್. ಧ್ರುವನಾರಾಯಣ್ ಮಾತನಾಡಿ, ನವೋದಯ ಶಾಲೆ ಮಾದರಿಯಲ್ಲಿ ಈ ವಸತಿ ಶಾಲೆಗಳ ಗುಣಮಟ್ಟ ಹೆಚ್ಚಿಸಬೇಕು. ಇದಕ್ಕೆ ಅಗತ್ಯ ಸಿಬ್ಬಂದಿ ನೇಮಿಸಬೇಕು ಹಾಗೂ ನಂಜನಗೂಡಿಗೆ ಪದವಿ ಕಾಲೇಜು ಮಂಜೂರು ಮಾಡಬೇಕು ಎಂದು ಮನವಿ ಮಾಡಿದರು. ಪೋಷಕರು ಶಾಲೆಯ ಕಟ್ಟಡವೆ ದೇಗುಲ ಎಂದು ಭಾವಿಸಿ ಮಕ್ಕಳಿಗೆ ಕಡ್ಡಾಯ ಶಿಕ್ಷಣ ಕೊಡಿಸಬೇಕು. ಅಲ್ಲದೆ, ನಂಜನಗೂಡಿಗೆ 8 ಕೋಟಿ ವೆಚ್ಚದಲ್ಲಿ ಉಪವಿದ್ಯುತ್ ಕೇಂದ್ರ ಸ್ಥಾಪನೆಗೆ ಎಲ್ಲಾ ಸಿದ್ಧತೆ ದೊರೆತಿದೆ ಎಂದು ತಿಳಿಸಿದರು.
ಜಿಪಂ ಹಂಗಾಮಿ ಅಧ್ಯಕ್ಷ ಸಿ.ಜೆ. ದ್ವಾರಕೀಶ್, ಜಿಪಂ ವಿರೋಧ ಪಕ್ಷ ನಾಯಕ ಕೆ. ಮಾರುತಿ, ಸದಸ್ಯ ಡಾ. ಶಿವರಾಮ್, ಜಿಪಂ ಸಿಇಒ ಪಿ.ಎ. ಗೋಪಾಲ್, ತಹಸೀಲ್ದಾರ್ ಅರುಳ್ಕುಮಾರ್, ಇಓ ಡಾ. ಕೃಷ್ಣಂರಾಜು, ಸಮಾಜ ಕಲ್ಯಾಣಾಧಿಕಾರಿ ಸರಸ್ವತಿ, ತಾಪಂ ಅಧ್ಯಕ್ಷ ಎಂ.ಎಸ್. ಮಲ್ಲಿಕಾರ್ಜುನಸ್ವಾಮಿ, ಉಪಾಧ್ಯಕ್ಷ ಚಿಕ್ಕೀರಮ್ಮ, ಸ್ಥಾಯಿ ಸಮಿತಿ ಅಧ್ಯಕ್ಷ ರವೀಂದ್ರ, ತಾಪಂ ಸದಸ್ಯರಾದ ಮಂಜುನಾಥ್, ದೇವಮ್ಮ, ಗ್ರಾಪಂ ಅಧ್ಯಕ್ಷ ರವಿ, ಉಪಾಧ್ಯಕ್ಷ ನಾಗರತ್ನಮ್ಮ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ. ಸುಬ್ಬಣ್ಣ, ಬಿ.ಎಸ್. ಮಹದೇವಪ್ಪ, ಕೆಪಿಸಿಸಿ ಸದಸ್ಯ ಅಕ್ಬರ್ ಅಲಿ, ಎಪಿಎಂಸಿ ಉಪಾಧ್ಯಕ್ಷ ಚಂದ್ರಪ್ಪ, ತಾಪಂ ಮಾಜಿ ಅಧ್ಯಕ್ಷ ನಾಗೇಶ್ರಾಜ್, ಮುಖಂಡರಾದ ಕಡಜೆಟ್ಟಿ ಮಹೇಶ, ಶಿವರುದ್ರ, ಗೋವಿಂದರಾಜ್, ಪುರಸಭಾ ಸದಸ್ಯ ದೊರೆಸ್ವಾಮಿ, ಗಿರೀಶ್, ನಾಗರಾಜು ಇದ್ದರು.