ಸರ್ಕಾರದ ಯೋಜನೆ ಮಣ್ಣು ಹಿಡಿಯುತ್ತಿವೆ: ಆರೋಪ
ಕ.ಪ್ರ.ವಾರ್ತೆ ಹುಣಸೂರು ಸೆ. 7
ಅಧಿಕಾರಿಗಳು ಸಾರ್ವಜನಿಕರಲ್ಲಿ ಅರಿವು ಮೂಡಿಸದೆ ಸರ್ಕಾರದ ಅನೇಕ ಯೋಜನೆಗಳು ಮಣ್ಣು ಹಿಡಿಯುವಂತಾಗಿದೆ ಎಂದು ತಾಪಂ ಉಪಾಧ್ಯಕ್ಷ ಮಹದೇವ್ ಆರೋಗ್ಯಾಧಿಕಾರಿಗಳನ್ನು ತರಾಟೆ ತೆಗೆದುಕೊಂಡರು.
ಪಟ್ಟಣದ ತಾಪಂ ಸಭಾಂಗಣದಲ್ಲಿ ಶನಿವಾರ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿ, ಪ್ರತಿ ಸಭೆಗೂ ತಾಲೂಕು ಆರೋಗ್ಯಾಧಿಕಾರಿ ಗೈರು ಹಾಜರಾಗಿ, ನೆಪ ಹೇಳಿ ವೈದ್ಯಾಧಿಕಾರಿಗಳನ್ನು ಕಳುಹಿಸುತ್ತಿದ್ದಾರೆ. ಮತ್ತೊಂದು ಕಡೆ ಆಸ್ಪತ್ರೆಗಳಲ್ಲಿ ವೈದ್ಯರು ಸರ್ಕಾರದ ಯೋಜನೆಗಳನ್ನು ಸಾರ್ವಜನಿಕರಿಗೆ ತಲುಪಿಸುವ ಕೆಲಸ ಮಾಡುತ್ತಿಲ್ಲ.
ಚಿಕಿತ್ಸೆ ನೀಡಲು ಔಷಧವಿಲ್ಲದೆ ಔಷಧ ಅಂಗಡಿಗೆ ಚೀಟಿ ಬರೆದು ಕಳುಹಿಸುತ್ತಿದ್ದಾರೆ ಎಂದು ಕಿಡಿಕಾರಿದರು.
ತಾಲೂಕು ಆರೋಗ್ಯಾಧಿಕಾರಿ ಗೈರುಹಾಜರಿಯಲ್ಲಿ ವೈದ್ಯ ಡಾ. ನವೀನ್ ಸಭೆಗೆ ಮಾಹಿತಿ ನೀಡಿ, ತಾಲೂಕಿನಲ್ಲಿ ಡೆಂಘೀ ಜ್ವರದ 40 ಪ್ರಕರಣ ಕಂಡುಬಂದು, 19 ಪ್ರಕರಣಕ್ಕೆ ಚಿಕಿತ್ಸೆ ನೀಡಲಾಗುತ್ತಿದೆ. ಈ ಪೈಕಿ ಮೂವರು ಗುಣಮುಖರಾಗಿದ್ದಾರೆ. ಆದರೆ, ಬೆಂಕಿಪುರ ಗ್ರಾಮದ 23 ವರ್ಷದ ದರ್ಶನ್ ಎಂಬಾತ ಮಾತ್ರ ಡೆಂಘೀ ಜ್ವರದಿಂದ ಮೃತಪಟ್ಟಿರುವುದಾಗಿ ತಿಳಿಸಿದರು.
ಕಳೆದ ಕೆಲ ತಿಂಗಳಿಂದ ತಮಗೆ ವಾಹನವಿಲ್ಲದೆ ತಾಲೂಕಿನ ಅಭಿವೃದ್ಧಿ ಸೇರಿದಂತೆ ಕಾಮಗಾರಿ ಪರಿಶೀಲನೆ ಸಾಧ್ಯವಾಗಿಲ್ಲ. ಪರಿಶೀಲನೆ ಮಾಡಲು ಬಹಳ ತೊಂದರೆಯಾಗಿದೆ ಎಂದು ದೇವಕಿ ತಿಮ್ಮನಾಯಕ ಹೇಳಿದರು.
ತಾಪಂ ಸ್ಥಾಯಿ ಸಮಿತಿ ನೂತನ ಅಧ್ಯಕ್ಷ ಪ್ರಭು, ಇಒ ಮಹದೇವಸ್ವಾಮಿ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.