ಇಂದಿನಿಂದ ಗಣಪತಿ ಮಹೋತ್ಸವ
ಕ.ಪ್ರ. ವಾರ್ತೆ ಟಿ. ನರಸೀಪುರ ಸೆ.8
ಇಲ್ಲಿನ ಖಾಸಗಿ ಬಸ್ ನಿಲ್ದಾಣದಲ್ಲಿ ಸೆ.9 ರಂದು 17ನೇ ವರ್ಷದ ಶ್ರೀ ಗಣಪತಿ ಮಹೋತ್ಸವ ವಿದ್ಯುಕ್ತವಾಗಿ ಆರಂಭವಾಗಲಿದೆ.
ಪ್ರತಿ ವರ್ಷದಂತೆಯೇ ಈ ಬಾರಿಯೂ ಮೈಸೂರು, ಮಂಡ್ಯ ಮತ್ತು ಚಾಮರಾಜನಗರ ಜಿಲ್ಲಾ ಖಾಸಗಿ ಬಸ್ ಮಾಲೀಕರ ಸಹಕಾರದೊಂದಿಗೆ ಖಾಸಗಿ ಬಸ್ ಏಜೆಂಟರ ಸಂಘದಿಂದ ಸೆ.26 ರವರೆಗೆ ಸತತ ಹದಿನೆಂಟು ದಿನಗಳ ಕಾಲ ಗಣಪತಿ ಮಹೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ ಪಿ.ಪುಟ್ಟರಾಜು ಹೇಳಿದರು.
ಎಲ್ಲ ಸಾಂಸ್ಕೃತಿಕ ಕಾರ್ಯಕ್ರಮಗಳು ಸಂಜೆ 6ಕ್ಕೆ ಆರಂಭವಾಗಲಿದೆ. ಅದರಂತೆ ಸೆ.9ರ ಸಂಜೆ ಗಣಪತಿಯ ಪ್ರತಿಷ್ಠಾಪನೆಯೊಂದಿಗೆ ಉತ್ಸವ ಆರಂಭಗೊಳ್ಳಲಿದ್ದು, ಸೆ.11ರ ಬುಧವಾರ ಬದನಾಳು ಶಿವಕುಮಾರ ಶಾಸ್ತ್ರಿ ಅವರಿಂದ ಮಹದೇಶ್ವರರ ಹರಿಕಥೆ, ಸೆ.13ರ ಶುಕ್ರವಾರ ಶಿವನಂಜಣ್ಣ ತಂಡದಿಂದ ಭಕ್ತಿ ಹಾಗೂ ಭಾವ ಗೀತೆಗಳು ಕಾರ್ಯಕ್ರಮಗಳು ನಡೆಯಲಿವೆ.
ಸೆ.14, ಯುವ ಕಲಾವಿದೆ ದಿವ್ಯ ತಂಡದಿಂದ ಭರತನಾಟ್ಯ, ಸೆ.15, ಸ್ವಾಮಿ ತಂಡದಿಂದ ಮಂಟೇಸ್ವಾಮಿ ಹರಿಕಥೆ, ಸೆ.16 ಕೊಳತ್ತೂರು ಪಿ.ಮಹದೇವಸ್ವಾಮಿ ತಂಡದಿಂದ ಭಕ್ತಿ ಹಾಗೂ ಭಾವಗೀತೆಗಳ ಗಾನಸುಧೆ, ಸೆ. 17 ಬಸವರಾಜು ತಂಡದಿಂದ ನೃತ್ಯ ಪ್ರದರ್ಶನ, ಸೆ.18 ಕೆ. ವಜ್ರೇಗೌಡರ ಅಧ್ಯಕ್ಷತೆಯಲ್ಲಿ ಮಹದೇಶ್ವರ ಕಲಾ ತಂಡದಿಂದ ದಕ್ಷಯಜ್ಞ ನಾಟಕ ಪ್ರದರ್ಶನ, ಸೆ.19, ತಂಬೂರಿ ಆರ್. ನಾಗೇಶ ತಂಡದಿಂದ ಸಿದ್ದಪ್ಪಾಜಿ ಹರಿಕಥೆ ಕಾರ್ಯಕ್ರಮ ಆಯೋಜಿಸಿದೆ.
ಸೆ.20ರ ಬೆಳಗ್ಗೆ 9 ರಿಂದ ಮಧ್ಯಾಹ್ನ ಒಂದರವರೆಗೆ ಕಣ್ಣಿನ ಉಚಿತ ತಪಾಸಣೆ ಶಿಬಿರ, ಸಂಜೆ 6ಕ್ಕೆ ಪ್ರಜಾಪಿತ ಈಶ್ವರಿಯ ಬ್ರಹ್ಮಕುಮಾರಿ ಅವರಿಂದ ಪ್ರವಚನ, ಸೆ.21, ಕಾವ್ಯ ಲಲಿತ ನಾಯ್ಡು ತಂಡದಿಂದ ಸುಗಮ ಸಂಗೀತ, ಸೆ. 23, ಮಧ್ಯಾಹ್ನ 12ಕ್ಕೆ ಸಾರ್ವಜನಿಕರಿಗೆ ದಾಸೋಹ ಏರ್ಪಡಿಸಿದೆ.
ಸೆ. 24, ಪವರ್ ಸ್ಟಾರ್ ಡ್ಯಾನ್ಸ್ ಗ್ರೂಪ್ ತಂಡದಿಂದ ನೃತ್ಯ, ಸೆ. 25 ಪುಟ್ಟು ಮೆಲೋಡಿಸ್ ತಂಡದಿಂದ ವಾದ್ಯಗೋಷ್ಠಿ ನಡೆಯಲಿದೆ. ಉತ್ಸವದ ಕೊನೆಯ ದಿನ ಸೆ.26 ಮಧ್ಯಾಹ್ನ 3.30ಕ್ಕೆ ಡೊಳ್ಳು ಕುಣಿತ, ಗೊಂಬೆ ಕುಣಿತ, ಕರಗ ಕುಣಿತ ಹಾಗೂ ಕೋಲಾಟಗಳ ಮೆರವಣಿಗೆಯೊಂದಿಗೆ ಗಣಪತಿ ಮೆರವಣಿಗೆ ನಡೆಸಿ, ತ್ರಿವೇಣಿ ಸಂಗಮದಲ್ಲಿ ವಿಸರ್ಜನೆ ಮಾಡಲಾಗುತ್ತದೆ. ಕೀರ್ತಿ ಸೌಂಡ್ಸ್ ಲೈಟ್ಸ್ ಆ್ಯಂಡ್ ಡೆಕೋರೇಷನ್ ಅವರಿಂದ ವಿದ್ಯುತ್ ದೀಪಾಲಂಕಾರದ ವ್ಯವಸ್ಥೆ ಮಾಡಲಾಗಿದೆ.