ಇಂದು ದಸರಾ ಆನೆಗಳಿಗೆ ವಿಶೇಷ ಪೂಜೆ
ಮೈಸೂರು: ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಕಾಡಿನಿಂದ ನಾಡಿಗೆ ಆಗಮಿಸಿರುವ ಮೊದಲ ತಂಡದ ಆರು ಆನೆಗಳಿಗೆ ಗಣಪತಿ ಹಬ್ಬದ ಅಂಗವಾಗಿ ಸೆ.9ರ ಮಧ್ಯಾಹ್ನ 12.30ಕ್ಕೆ ಅರಮನೆ ಆವರಣದಲ್ಲಿ ವಿಶೇಷ ಪೂಜೆ ಏರ್ಪಡಿಸಲಾಗಿದೆ. ಮೊದಲ ತಂಡದಲ್ಲಿ ಆಗಮಿಸಿರುವ ಅಂಬಾರಿ ಆನೆ ಅರ್ಜುನ, ಬಲರಾಮ, ಗಜೇಂದ್ರ, ಅಭಿಮನ್ಯು, ವರಲಕ್ಷ್ಮಿ, ಸರಳ ಆನೆಗೆ ಪೂಜೆ ಸಲ್ಲಿಸಿ, ಸಿಹಿ ವಿತರಿಸಲಾಗುವುದು ಎಂದು ಆನೆ ವೈದ್ಯ ಡಾ. ನಾಗರಾಜ್ ತಿಳಿಸಿದ್ದಾರೆ.
ಬಲರಾಮ ತಾಲೀಮು: ಮಾಜಿ ಅಂಬಾರಿ ಆನೆ ಬಲರಾಮನಿಗೆ ಭಾನುವಾರ 250 ಕೆ.ಜಿ. ಬಾರ ಕಟ್ಟಿ ತಾಲೀಮು ನಡೆಸಲಾಯಿತು. ಬಲರಾಮನ ಜತೆಗೆ ಇತರೆ ಆನೆಗಳು ಅರಮನೆಯಿಂದ ಹೊರಟು ಕೋಟೆ ಆಂಜನೇಯಸ್ವಾಮಿ ದೇವಸ್ಥಾನ, ಚಾಮರಾಜ ವೃತ್ತ, ಕೆ.ಆರ್. ವೃತ್ತ, ಸಯ್ಯಾಜಿರಾವ್ ರಸ್ತೆ ಮೂಲಕ ಹೈವೆ ವೃತ್ತದವರೆಗೆ ತಲುಪಿ ಅದೇ ಮಾರ್ಗವಾಗಿ ವಾಪಸ್ ಅರಮನೆಗೆ ಬಂದು ತಲುಪಿದವು. ಗಜಪಡೆಯ ಶ್ರೀರಾಮ, ಹರ್ಷ, ವಿಕ್ರಮ, ಗೋಪಾಲಸ್ವಾಮಿ, ದುರ್ಗಾಪರಮೇಶ್ವರಿ, ವಿಜಯ, ಪ್ರಶಾಂತ ಮತ್ತು ಗೋಪಿ ಆನೆಗಳು ಇನ್ನೂ ಕೆಲವೇ ದಿನಗಳಲ್ಲಿ 2ನೇ ತಂಡದಲ್ಲಿ ಆಗಮಿಸಿ ಮೊದಲ ತಂಡದೊಂದಿಗೆ ಸೇರಿಕೊಳ್ಳಲಿವೆ.