ಲೀಡರ್ಸ್- ಕಾರ್ಪೊರೇಟರ್ಸ್ ಕಪ್ ಕ್ರಿಕೆಟ್ ಆರಂಭ
ಕ.ಪ್ರ. ವಾರ್ತೆ ಮೈಸೂರು ಸೆ.8
ಸಂತ ಫಿಲೋಮಿನಾ ಕಾಲೇಜು ಮೈದಾನದಲ್ಲಿ ಸುಲ್ತಾನ್ ಟಿಪ್ಪು ಕ್ರಿಕೆಟ್ ಕ್ಲಬ್ ಆಯೋಜಿಸಿರುವ 8 ದಿನಗಳ ಲೀಡರ್ಸ್ ಮತ್ತು ಕಾರ್ಪೊರೇಟರ್ಸ್ ಕ್ರಿಕೆಟ್ ಕಪ್ ಪಂದ್ಯಾವಳಿಯನ್ನು ಬಿಎಸ್ಆರ್ ಕಾಂಗ್ರೆಸ್ ಅಧ್ಯಕ್ಷ ಇಕ್ರಂ ಸಿದ್ದಿಖಿ ಭಾನುವಾರ ಬೆಳಗ್ಗೆ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ವಿವಿಧ ರಾಜಕೀಯ ಪಕ್ಷಗಳ ನಗರಪಾಲಿಕೆ ಸದಸ್ಯರು, ಸಂಘ-ಸಂಸ್ಥೆಗಳ ಮುಖಂಡರು ಹಾಗೂ ಜನಸಾಮಾನ್ಯರ ನಡುವೆ ಉತ್ತಮ ಬಾಂಧವ್ಯ ಮೂಡಿಸಲು ಈ ಪಂದ್ಯಾವಳಿ ಆಯೋಜಿಸಲಾಗಿದೆ. ಯುವಜನತೆಯಲ್ಲಿರುವ ಪ್ರತಿಭೆ ಹೊರತರಲು ಹಾಗೂ ದುಶ್ಚಟಗಳ ವಿರುದ್ಧ ಜಾಗೃತಗೊಳಿಸಲು ಕ್ರೀಡೆ ಸಹಕಾರಿಯಾಗಿದೆ ಎಂದರು. ಪಂದ್ಯಾವಳಿ ಸಂಯೋಜಕ ಅಮೀನ್ ಸೇಠ್ ಮಾತನಾಡಿ, ಈ ಬಾರಿಯ ಪಂದ್ಯಾವಳಿಯಲ್ಲಿ 10 ತಂಡಗಳು ಭಾಗವಹಿಸಿದ್ದು, ಸೆ.15 ರವರೆಗೆ ಪಂದ್ಯಾವಳಿ ನಡೆಯಲಿದೆ. ಸೆ.14 ಮತ್ತು 15 ರಂದು ಸೆಮಿಫೈನಲ್ ಮತ್ತು ಫೈನಲ್ ಪಂದ್ಯಗಳು ನಡೆಯಲಿವೆ ಎಂದು ತಿಳಿಸಿದರು.
ಇದೇ ವೇಳೆ ಲೀಡರ್ಸ್ ಮತ್ತು ಕಾರ್ಪೊರೇಟರ್ ತಂಡಗಳ ನಡುವೆ ನಡೆದ ಮೊದಲ ಕ್ರಿಕೆಟ್ ಪಂದ್ಯದಲ್ಲಿ ಪಾಲಿಕೆ ಸದಸ್ಯರಾದ ಎಸ್. ಸ್ವಾಮಿ, ಅಕ್ರಂ ಷರೀಫ್, ಫೈರೋಜ್ ಖಾನ್, ಸುಹೇಲ್ ಬೇಗ್, ಸಮಾಜ ಸೇವಕ ತಹೇರ್ ಆಲಿ, ಮೊಹಮ್ಮದ್ ಷರೀಫ್, ಮೊಹಮ್ಮದ್ ಅಲಿ, ಮೊಹಮ್ಮದ್ ಜಲೀಲ್, ಮೊಹಮ್ಮದ್ ಫೈಸಲ್, ಮಹ್ಬೂಬ್, ಖುರೇಶ್ ಭಾಗವಹಿಸಿದ್ದರು. ಈ ಎರಡು ತಂಡಗಳ ಸೆಣಸಾಟದಲ್ಲಿ ಇಕ್ರಂ ಸಿದ್ದಿಖಿ ನಾಯಕತ್ವದ ಲೀಡರ್ಸ್ ತಂಡವು ಜಯ ಸಾಧಿಸಿತು.