'ಹಳ್ಳಿಗಳಿಗೆ ಭೇಟಿ ನೀಡಿ, ಸಮಸ್ಯೆ ಚರ್ಚೆ'
ಕ.ಪ್ರ. ವಾರ್ತೆ ಬೈಲುಕುಪ್ಪೆ ಸೆ.8
ಗ್ರಾಮಾಂತರ ಪ್ರದೇಶದ ಪ್ರತಿ ಹಳ್ಳಿಗೂ ಭೇಟಿ ನೀಡಿ, ಸಾರ್ವಜನಿಕರಲ್ಲಿ ಚರ್ಚಿಸಿ, ಸಮಸ್ಯೆ ಪರಿಹರಿಸಲಾಗುವುದು ಎಂದು ಶಾಸಕ ಕೆ. ವೆಂಕಟೇಶ್ ಹೇಳಿದರು.
ಕೊಪ್ಪ ಗ್ರಾಮದ ಪಂಚಾಯಿತಿ ಆವರಣದಲ್ಲಿ ಶನಿವಾರ ಜನಸಂಪರ್ಕ ಸಭೆಯಲ್ಲಿ ಮಾತನಾಡಿದ ಅವರು, ವಿಧಾನಸಭೆ ಚುನಾವಣೆ ಕಳೆದ ನಂತರ ಮಳೆ ಕಾರಣದಿಂದಾಗಿ ಗ್ರಾಮೀಣ ಪ್ರದೇಶದ ಯಾವುದೆ ಪ್ರದೇಶಕ್ಕೆ ಭೇಟಿ ನೀಡಲು ಆಗಲಿಲ್ಲ. ಗ್ರಾಮಗಳಿಗೆ ಭೇಟಿ ನೀಡಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಲಾಗುವುದು. ಗ್ರಾಮೀಣ ಪ್ರದೇಶದ ಸಮಸ್ಯೆಗಳ ಬಗ್ಗೆ ಅಧಿಕಾರಿಗಳಿಗೆ ಅರಿವು ಮೂಡಿಸಲು ಪ್ರತಿ ಇಲಾಖೆಯ ಅಧಿಕಾರಿಗಳನ್ನು ಸಹ ಪ್ರತಿ ಹಳ್ಳಿಗಳಿಗೂ ಕರೆದುಕೊಂಡು ಹೋಗಲಾಗುತ್ತದೆ. ಹಳ್ಳಿಗಳಲ್ಲಿ ಗ್ರಾಮಸ್ಥರು ನೀಡುವ ದೂರುಗಳನ್ನು ಬಗೆಹರಿಸುವಂತೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಸ್ಥಳದಲ್ಲಿಯೇ ಸೂಚಿಸಲಾಗುವುದು ಎಂದು ತಿಳಿಸಿದರು.
ಕುಡಿಯುವ ನೀರು, ವಿದ್ಯುತ್ ದೀಪ, ಒಳ ಚರಂಡಿ ಹಾಗೂ ರಸ್ತೆಯ ಅಭಿವೃದ್ಧಿ ಮಾಡಿಸುವಂತೆ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ, ಪ್ರತಿಕ್ರಿಯಿಸಿದ ಶಾಸಕರು, ರಾಜ್ಯ ಹಾಗೂ ಕೇಂದ್ರಗಳಲ್ಲಿ ನಮ್ಮ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿರುವುದರಿಂದ ಅನುದಾನ ತಂದು ಗ್ರಾಮೀಣ ಭಾಗದ ಹಳ್ಳಿಗಳ ಅಭಿವೃದ್ಧಿಗೆ ಹಂತ ಹಂತವಾಗಿ ಕೆಲಸ ಮಾಡಿಸುವುದಾಗಿ ಭರವಸೆ ನೀಡಿದರು.
ಕೊಪ್ಪ ಗ್ರಾಪಂ ಅಧ್ಯಕ್ಷೆ ಗಂಗಾಂಬಿಕೆ, ಜಿಪಂ ಸದಸ್ಯೆ ಕಾವೇರಿ ಶೇಖರ್, ತಹಸೀಲ್ದಾರ್ ಸವಿತಾ, ತಾಪಂ ಸದಸ್ಯ ನವಲೂರು ಮಹದೇವ, ತಾಪಂ ಮಾಜಿ ಅಧ್ಯಕ್ಷ ಐಲಾಪುರದ ರಾಮು, ಎಪಿಎಂಸಿ ಅಧ್ಯಕ್ಷ ಹೊಲದಪ್ಪ, ತಾಪಂ ಪ್ರಬಾರ ಇಓ ಮನೋಹರ್ ಇದ್ದರು.