ಕೃಷಿ ನಿರ್ದೇಶಕ ವೆಂಕಟೇಶ್ಗೆ ಬೀಳ್ಕೊಡುಗೆ
ಎಚ್.ಡಿ. ಕೋಟೆ: ತಾಲೂಕು ಸಹಾಯಕ ಕೃಷಿ ನಿರ್ದೇಶಕರಾಗಿ ಸೇವೆ ಸಲ್ಲಿಸಿ ಬೇರೆಡೆ ವರ್ಗಾವಣೆಗೊಂಡ ವೆಂಕಟೇಶ್ ಅವರನ್ನು ತಾಲೂಕು ಬಿತ್ತನೆ ಬೀಜ, ರಸಗೊಬ್ಬರ ಹಾಗೂ ಕ್ರಿಮಿನಾಶಕಗಳ ಮಾರಾಟಗಾರರ ಸಂಘದ ಪದಾಧಿಕಾರಿಗಳು ಸನ್ಮಾನಿಸಿ ಬೀಳ್ಕೊಟ್ಟರು.
ತಾಲೂಕಿನ ಹ್ಯಾಂಡ್ಪೋಸ್ಟ್ ಬಳಿಯ ಮೈರಾಡ ಕಚೇರಿಯ ಸಭಾಂಗಣದಲ್ಲಿ ನಡೆದ ಸರಳ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ವೆಂಕಟೇಶ್, ತಾಲೂಕಿನ ರೈತರು, ರಸಗೊಬ್ಬರ ಮಾರಾಟಗಾರರು ತಮಗೆ ಸಂಪೂರ್ಣ ಸಹಕಾರ ನೀಡಿದರು. ಜತೆಗೆ ಸಹೋದ್ಯೋಗಿಗಳು ನೀಡಿದ ಬೆಂಬಲದಿಂದ ಉತ್ತಮವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಯಿತು ಎಂದು ಸ್ಮರಿಸಿದರು. ತಾಲೂಕು ಅಧ್ಯಕ್ಷ ಲಕ್ಷ್ಮೀನರಸಿಂಹ ಮಾತನಾಡಿ, ತಾಲೂಕಿನಲ್ಲಿ ಕಳೆದ 2 ವರ್ಷಗಳ ಹಿಂದೆ ಹತ್ತಿ ಬಿತ್ತನೆ ಬೀಜದ ಸರಬರಾಜಿನಲ್ಲಿ ತೊಂದರೆಯಾದ ವೇಳೆಯಲ್ಲಿ ಮೈಸೂರು ಜಿಲ್ಲಾಧಿಕಾರಿ ಹರ್ಷಗುಪ್ತ, ತಹಸೀಲ್ದಾರ್ ಜಗದೀಶ್ ಹಾಗೂ ವೆಂಕಟೇಶ್ ಸಕಾಲದಲ್ಲಿ ಆಗಮಿಸಿ ಅನಾಹುತ ತಪ್ಪಿಸಿದರು. ತಾಲೂಕಿನಲ್ಲಿ ಇಂತಹ ಉತ್ತಮ ಅಧಿಕಾರಿಗಳು ಇರುವುದರಿಂದಲೇ ಮಾರಾಟ ಮಾಡಲು ಸಾಧ್ಯವಾಯಿತು ಎಂದರು.
ನೂತನ ಸಹಾಯಕ ಕೃಷಿ ನಿರ್ದೇಶಕ ಜಯರಾಮಯ್ಯ, ಕೃಷಿ ಅಧಿಕಾರಿಗಳಾದ ಹರೀಶ್, ಗುರುಪ್ರಸಾದ್, ಗೌರವಾಧ್ಯಕ್ಷ ಶ್ರೀಕಂಠಮೂರ್ತಿ, ಉಪಾಧ್ಯಕ್ಷ ಹೇಮಂತ ಕುಮಾರ್, ಕೆಂಡಗಣ್ಣ ಆರಾಧ್ಯ, ಮಾದಾಪುರ ನಾಗೇಂದ್ರ, ಸರಗೂರು ಭೃಗೇಶ್ ರಾಜೇಂದ್ರ ಚಕ್ಕೋಡನಹಳ್ಳಿ ಇದ್ದರು.