ಕೃಷ್ಣಯ್ಯ ವಿರುದ್ಧ ಆಸ್ತಿ ಕಬಳಿಕೆ ಆರೋಪ
ಹುಣಸೂರು: ಕರ್ನಾಟಕ ರಾಜ್ಯ ಲ್ಯಾಂಪ್ಸ್ ಸಹಕಾರ ಮಹಾಮಂಡಳಿ ಅಧ್ಯಕ್ಷ ಎಂ.ಕೃಷ್ಣಯ್ಯ ಸಮಾಜ ಸೇವೆಯ ಹೆಸರಿನಲ್ಲಿ ದಲಿತರಾದ ಅಂಗವಿಕಲೆ ಸಣ್ಣನಂಜಮ್ಮ ಹಾಗೂ ಮತ್ತಿತರ ಸಾರ್ವಜನಿಕರಿಗೆ ಸೇರಿದ ಆಸ್ತಿಯನ್ನು ಕಬಳಿಸಲು ಯತ್ನಿಸಿ ಸಮಾಜದ ಕಂಟಕರಾಗಿದ್ದಾರೆ ಎಂದು ಕರ್ನಾಟಕ ಪ್ರದೇಶ ಮಾದಿಗರ ಸಂಘದ ರಾಜ್ಯಾಧ್ಯಕ್ಷ ಎಚ್.ಪಿ.ಸತೀಶ್ ಕುಮಾರ್ ಆರೋಪಿಸಿದರು.
ಪಟ್ಟಣದ ಸದಾಶಿವನಕೊಪ್ಪಲು ಬಡಾವಣೆಯ ನಿವಾಸಿ ಸಣ್ಣನಂಜಮ್ಮ ಪತಿ ಲೇ. ಕರಿಯ್ಯ ಅವರಿಗೆ ಹುಣಸೂರು- ಪಿರಿಯಾಪಟ್ಟಣದ ಮುಖ್ಯರಸ್ತೆಯಲ್ಲಿ ತಾಲೂಕಿನ ತಮ್ಮಡಹಳ್ಳಿಯ ಸರ್ವೆ ನಂ. 37/32ರಲ್ಲಿ 4 ಎಕರೆ ಜಮೀನನ್ನು 1967-68ರಲ್ಲಿ ಸರ್ಕಾರ ಮಂಜೂರಾತಿ ಮಾಡಿತ್ತು. ನಂತರ ಅವರು ಕಾನೂನಿನ ಅರಿವಿಲ್ಲದೆ ಕುಟುಂಬದ ಸಮಸ್ಯೆಗೆ ಸಿಲುಕಿ ವೆಂಕಟರಾಮಯ್ಯ ಅವರಿಗೆ ಮಾರಾಟ ಮಾಡಿದ್ದು, ಸರ್ಕಾರದ ಗಮನಕ್ಕೆ ಬಂದು ಪಿಟಿಸಿಎಲ್ ಕಾಯಿದೆಯಡಿ ಉಪವಿಭಾಗಾಧಿಕಾರಿಗಳ ಘನ ನ್ಯಾಯಾಲಯದಲ್ಲಿ ವಾಪಸ್ ಕೊಡಿಸಲಾಗಿತ್ತು. ಅಂದಿನಿಂದಲ್ಲೂ ಈ ಜಮೀನನ್ನು ವ್ಯವಸಾಯ ಮಾಡಿಕೊಂಡು ಬರಲಾಗುತ್ತಿತ್ತು.
ಎಂ. ಕೃಷ್ಣಯ್ಯ ಕಳೆದ ಹತ್ತಾರು ವರ್ಷಗಳಿಂದ ಆಗಾಗ್ಗೆ ಕಾಲು ಕೆರೆದು ಜಗಳ ಮಾಡುವುದು ಮತ್ತು ಜಮೀನಿನ ಫಸಲು ನಾಶಗೊಳಿಸುವುದು ಮತ್ತು ದಲಿತರು, ಇತರರ ಆಸ್ತಿಯನ್ನು ಆಕ್ರಮಿಸಲು ಯತ್ನಿಸುತ್ತಿದ್ದರು. ಆಗಾಗ್ಗೆ ಜಾತಿ ನಿಂದನೆ ಪ್ರಕರಣ ಹಾಕುವ ಮೂಲಕ ಬೆದರಿಕೆವೊಡ್ಡಿ, ಮಾನಸಿಕ ಮತ್ತು ದೈಹಿಕವಾಗಿ ಹಿಂಸೆ ನೀಡುತ್ತಿರುವ ಬಗ್ಗೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿವೆ ಎಂದು ತಿಳಿಸಿದರು.
ಈ ಸಂಬಂಧವಾಗಿ ಉಪವಿಭಾಗಾಧಿಕಾರಿಗಳ ನ್ಯಾಯಾಲಯ ಹಾಗೂ ಹೈಕೋರ್ಟ್ನಲ್ಲಿ ಮೊಕದ್ದಮೆ ದಾಖಲಿಸಿ ತೀರ್ಪು ಸಹ ಸಣ್ಣನಂಜಮ್ಮ ಅವರ ಪರ ಬಂದ ಬಳಿಕ ಸರ್ವೆ ನಂ. 37/32ರ ಜಮೀನನ್ನು ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳ ಮಹಜರು ಮಾಡಿ ದುರಸ್ತಿಗೊಳಿಸಿದ ಬಳಿಕ ತಿದ್ದುಪಡಿಯಾಗಿ ಸ.ನಂ 174 ಆಗಿದ್ದು, ಈ ಪೈಕಿ 38 ಗುಂಟೆಯನ್ನು ಇಟ್ಟಿಗೆ ಫ್ಯಾಕ್ಟರಿ ಆರಂಭಿಸಲು ಜಿಲ್ಲಾಧಿಕಾರಿಗಳ ಮುಖೇನ ಭೂಪರಿವರ್ತನೆಗೊಳಿಸಿ ಕಲ್ಲಕಂಬ ಹಾಕಲಾಗಿತ್ತು. ಇದನ್ನು ಸಹಿಸದ ಕೃಷ್ಣಯ್ಯ ರಾತ್ರೋರಾತ್ರಿ ಬಂದು ಪಕ್ಕದ ನಿವಾಸಿ ಗೌರಮ್ಮ ಮನೆಗೆ ಚಿಲಕ ಹಾಕಿ ಕೊಲೆ ಬೆದರಿಕೆವೊಡ್ಡಿ, ಜಮೀನಿನ ತಂತಿಬೇಲಿಯ ಕಲ್ಲುಕಂಬಗಳನ್ನು ನಾಶಗೊಳಿಸಿದ್ದರು ಎಂದು ದೂರಿದರು.
ತನಿಖೆ ಮಾಡುವಂತೆ ಆಗ್ರಹ: ಶೋಷಿತ ಮತ್ತು ದುರ್ಬಲ ವರ್ಗಗಳ ಅಭಿವೃದ್ಧಿಗಾಗಿ ಬಳಸಬೇಕಾದ ಸಂವಿಧಾನದ ಹಕ್ಕನ್ನು ಕರ್ನಾಟಕ ರಾಜ್ಯ ಲ್ಯಾಂಪ್ಸ್ ಸಹಕಾರ ಮಹಾಮಂಡಳಿ ಅಧ್ಯಕ್ಷ ಎಂ. ಕೃಷ್ಣಯ್ಯ ಸ್ವಾರ್ಥಕ್ಕಾಗಿ ಬಳಸಿಕೊಂಡು, ಲ್ಯಾಂಪ್ಸ್ ಸಹಕಾರ ಸಹಕಾರ ಮಹಾಮಂಡಳಿ ಮತ್ತು ಇದರ ವ್ಯಾಪ್ತಿಯಲ್ಲಿ ಬರುವ ಸಹಕಾರ ಸಂಘಗಳಲ್ಲಿ ಅಕ್ರಮ ನಡೆದಿರುವ ಬಗ್ಗೆ ಅನುಮಾನ ಬಂದಿದೆ. ಸಂಬಂಧಿಸಿದ ಅಧಿಕಾರಿಗಳು ತನಿಖೆ ಮಾಡುವಂತೆ ಅವರು ಆಗ್ರಹಿಸಿದರು.