ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ನಗರದ ವಿವಿಧೆಡೆ ಗಣಪತಿ ಆರಾಧನೆ

Rashmi Kasaragodu
Updated On : 11 Sept 2013, 1:10 am

ಕ.ಪ್ರ. ವಾರ್ತೆ   ಮೈಸೂರು   ಸೆ.10
ಗಣೇಶ ಚತುರ್ಥಿ ಅಂಗವಾಗಿ ನಗರದ ವಿವಿಧ ಗಣಪತಿ ದೇವಸ್ಥಾನಗಳಲ್ಲಿ ಮತ್ತು ಸಾರ್ವಜನಿಕರು ಪ್ರತಿಷ್ಠಾಪಿಸಿದ್ದ ಗಣಪತಿ ಪೂಜಾ ಕೇಂದ್ರಗಳಲ್ಲಿ ಸೋಮವಾರ ವಿಶೇಷ ಪೂಜೆ ನಡೆಯಿತು.
ನಗರದ ಅಗ್ರಹಾರ ಸಮೀಪದ ನೂರೊಂದು ಗಣಪತಿ ದೇವಸ್ಥಾನ, ವಾಣಿವಿಲಾಸ ರಸ್ತೆಯ ಗಣಪತಿ ದೇವಸ್ಥಾನ, ಸಯ್ಯಾಜಿರಾವ್ ರಸ್ತೆಯ ಪಂಚಮುಖಿ ಗಣಪತಿ ದೇವಸ್ಥಾನಗಳಲ್ಲಿ ಸೋಮವಾರ ಬೆಳಗ್ಗೆಯಿಂದಲೆ ವಿಶೇಷ ಪೂಜೆ, ಅಭಿಷೇಕ ನೆರವೇರಿತು.
ಗೌರಿ ಹಬ್ಬದ ದಿನದಿಂದಲೆ ಎಲ್ಲಾ ದೇವಸ್ಥಾನಗಳಿಗೂ ವಿಶೇಷ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು. ಕನಕಾಂಬರ, ಮಲ್ಲಿಗೆ, ಸೇವಂತಿಗೆ ಮತ್ತು ಚೆಂಡು ಹೂಗಳಿಂದ ದೇವಸ್ಥಾನದ ಆವರಣ ಮತ್ತು ಗಣಪತಿಯನ್ನು ಅಲಂಕರಿಸಲಾಗಿತ್ತು. ಭಾದ್ರಪದ ಮಾಸದ ಚೌತಿಯ ಬೆಳಗ್ಗೆಯಿಂದಲೆ ದೇವರಿಗೆ ಅಭಿಷೇಕ, ಅಲಂಕಾರ, ನೈವೇದ್ಯ, ಮಹಾಮಂಗಳಾರತಿ ನಡೆಯಿತು. ಬಳಿಕ ಮಧ್ಯಾಹ್ನ ಪ್ರಸಾದ ವಿತರಿಸಲಾಯಿತು. ನೂರಾರು ಮಂದಿ ಭಕ್ತರು ಪೂಜೆಯಲ್ಲಿ ಭಾಗವಹಿಸಿ ಪುನೀತ ಭಾವ ತಾಳಿದರು.
ಇಲವಾಲದ ಶ್ರೀ ಶಕ್ತಿಗಣಪತಿ ದೇವಸ್ಥಾನ, ನೂರೊಂದು ಗಣಪತಿ ದೇವಸ್ಥಾನ ಮತ್ತು ಅರಮನೆ ಹಿಂದಿನ ಶ್ರೀ ಸಿದ್ಧಿ ವಿನಾಯಕ ದೇವಸ್ಥಾನದ ಗಣಪತಿಗೆ ಮೋದಕ ಮತ್ತು ಮೂಸಂಬಿಯಿಂದ ಅಲಂಕರಿಸಲಾಗಿತ್ತು.
ಅರಮನೆ ಕೋಟೆಯ ಉತ್ತರದ್ವಾರದ ಮುಜರಾಯಿ ಇಲಾಖೆಗೆ ಸೇರಿದ ಶ್ರೀ ವಿನಾಯಕ ಸ್ವಾಮಿ ದೇವಸ್ಥಾನದಲ್ಲಿ ಗಣೇಶ ಚತುರ್ಥಿ ಅಂಗವಾಗಿ ವಿದ್ವಾನ್ ಬಿಳಿಕೆರೆ ಬಿ.ಎಸ್. ಗಂಗಾಧರ ಆಚಾರ್ ಅವರಿಂದ ಹರಿಕಥೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ವಿದ್ವಾನ್ ಎಚ್.ಕೆ. ನರಸಿಂಹಮೂರ್ತಿ ಮತ್ತು ವೃಂದದವರಿಂದ ಪಿಟೀಲು ವಾದನ ಏರ್ಪಡಿಸಲಾಗಿತ್ತು.
ಅಲ್ಲದೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಗಣೇಶ ವಿಗ್ರಹಗಳ ಸಾಮೂಹಿಕ ವಿಸರ್ಜನೆಗಾಗಿ ಸಿದ್ಧಪಡಿಸಿದ್ದ ಸಂಚಾರಿ ವಾಹನವು ನಗರದ ವಿವಿಧೆಡೆ ಸಂಚರಿಸಿತು.
ಒಂದು ವಾಹನವು ಮೇಟಗಳ್ಳಿ ಪೊಲೀಸ್ ಠಾಣೆ, ಕಾಳಿದಾಸ ವೃತ್ತ, ವಿಜಯನಗರ 2ನೇ ಹಂತ, ಒಂಟಿಕೊಪ್ಪಲು ಚಂದ್ರಮೌಳೇಶ್ವರ ದೇವಸ್ಥಾನ ಮತ್ತು ಮಾತೃಮಂಡಳಿ ಹತ್ತಿರ ಮತ್ತು ಕುಕ್ಕರಹಳ್ಳಿ ಮುಖ್ಯದ್ವಾರದಲ್ಲಿ ಇತ್ತು. ಮತ್ತೊಂದು ವಾಹನವು ಯಾದವಗಿರಿ, ವಿಕ್ರಮ್ ಆಸ್ಪತ್ರೆ, ಶಾಂತಲಾ ಚಿತ್ರಮಂದಿರ ಹತ್ತಿರ, ಚಾಮುಂಡಿಪುರಂ ವೃತ್ತ ಮತ್ತು ಕಾರಂಜಿ ಮುಖ್ಯದ್ವಾರದಲ್ಲಿ ಇತ್ತು. ಮಗದೊಂದು ವಾಹನವು ಜಯಮ್ಮ ಗೋವಿಂದೇಗೌಡ ಕಲ್ಯಾಣ ಮಂಟಪ, ಜಯನಗರ ರೇಲ್ವೆಗೇಟ್ ಹತ್ತಿರ, ಜೆ.ಪಿ.ನಗರ ಗೊಬ್ಬಳಿ ಮರದ ನಿಲ್ದಾಣ ಮತ್ತು ಲಿಂಗಾಬುದಿ ಮುಖ್ಯದ್ವಾರದಲ್ಲಿ ಇತ್ತು.
ವಿಸರ್ಜನಾ ಕೇಂದ್ರ ತೆರೆಯಿರಿ: ಶ್ರೀರಂಗಪಟ್ಟಣ ಸಮೀಪದ ಸಂಗಮದ ಬಳಿ ದೊಡ್ಡ ತೊಟ್ಟಿ ನಿರ್ಮಿಸಿ ಗಣಪತಿ ವಿಸರ್ಜನೆಗೆ ಅನುವು ಮಾಡಿಕೊಡುವುದಾಗಿ ಮಂಡ್ಯ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ ಎಂದು ಕುಕ್ಕರಹಳ್ಳಿ ಕೆರೆ ಸಂರಕ್ಷಣಾ ಸಮಿತಿ ಸಂಚಾಲಕ ಕೆ.ಎಂ. ಜಯರಾಮಯ್ಯ ತಿಳಿಸಿದ್ದಾರೆ.
ತಮ್ಮ ಮನವಿಗೆ ಸ್ಪಂದಿಸಿರುವ ಅವರು ಜೇಡಿಮಣ್ಣಿನ ಅಥವಾ ಸಗಣಿ ಮತ್ತು ಗರಿಕೆಯಿಂದ ಮಾಡಿದ ಗಣಪತಿಯನ್ನು ಸಾರ್ವಜನಿಕರು ಪೂಜಿಸುವವರೆಗೆ ಈ ಗಣಪತಿ ವಿಸರ್ಜನಾ ತೊಟ್ಟಿ ನಿರ್ಮಿಸಬೇಕು ಎಂದು ಮನವಿ ಮಾಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement