ವೃದ್ಧನ ಕೊಲೆ ಮಾಡಿದ್ದ ಆರೋಪಿ ಬಂಧನ
ಮೈಸೂರು: ಒಂಟಿಯಾಗಿದ್ದ ವೃದ್ಧನನ್ನು ಕೊಲೆ ಮಾಡಿ ಚಿನ್ನಾಭರಣ ದೋಚಿದ್ದ ಆರೋಪಿಯನ್ನು ನಗರದ ವಿ.ವಿ. ಪುರಂ ಠಾಣೆ ಪೊಲೀಸರು ಬಂಧಿಸಿ 1.75 ಲಕ್ಷ . ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.
ಹೆಬ್ಬಾಳು 1ನೇ ಹಂತ ನಿವಾಸಿ ಮಣಿಕಂಠ ಅ. ಮಣಿ (25) ಬಂಧಿತ ಆರೋಪಿ. ಈತ ಮೂಲತಃ ಪಿರಿಯಾಪಟ್ಟಣ ತಾಲೂಕು ಮುದ್ದನಹಳ್ಳಿ ನಿವಾಸಿ. ಮೈಸೂರಿನಲ್ಲಿ ನೀರು ಸರಬರಾಜು ಕೆಲಸ ಮಾಡಿಕೊಂಡಿದ್ದ. ಆ.30 ರಂದು ನಂದಗೋಕುಲ 3ನೇ ಹಂತದಲ್ಲಿ ವಾಸವಾಗಿದ್ದ ನಿಂಗ (76) ಎಂಬವರನ್ನು ಕೊಲೆ ಮಾಡಿ ಚಿನ್ನಾಭರಣ ದೋಚಿದ್ದ.
ಮಣಿಕಂಠನನ್ನು ಸೋಮವಾರ ಪೊಲೀಸರು ಹಿಡಿದು ವಿಚಾರಣೆಗೊಳಪಡಿಸಿದಾಗ ಕೊಲೆ ಮಾಡಿ ಚಿನ್ನಾಭರಣ ದೋಚಿದ್ದನ್ನು ಒಪ್ಪಿಕೊಂಡಿದ್ದಾನೆ. ದೋಚಿದ್ದ 54 ಗ್ರಾಂ. ತೂಕದ ಚಿನ್ನಾಭರಣಗಳನ್ನು ಗಿರವಿ ಇಟ್ಟಿದ್ದು, ತನಿಖೆ ವೇಳೆ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಮಣಿ ಸಾಕಷ್ಟು ಸಾಲ ಮಾಡಿಕೊಂಡಿದ್ದ. ನಿಂಗ ಅವರ ಪುತ್ರಿಯ ಮೂಲಕ ಮಣಿ ಆಗಾಗ ಮನೆಗೆ ಬರುತ್ತಿದ್ದ. ಆ.30 ರಂದು ಮನೆಯಲ್ಲಿ ಒಂಟಿಯಾಗಿದ್ದ ನಿಂಗನನ್ನು ಉಸಿರುಗಟ್ಟಿಸಿ, ನಂತರ ಕತ್ತು ಬಿಗಿದು ಕೊಲೆ ಮಾಡಿ ಚಿನ್ನಾಭರಣ ದೋಚಿದ್ದ ಎಂದು ನಗರ ಪೊಲೀಸ್ ಆಯುಕ್ತ ಡಾ.ಎಂ.ಎ. ಸಲೀಂ ಮಂಗಳವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಡಿಸಿಪಿ ಎಂ.ಎಂ. ಮಹದೇವಯ್ಯ, ಎನ್.ಆರ್. ಉಪ ವಿಭಾಗದ ಎಸಿಪಿ ಸಿ.ಡಿ. ಜಗದೀಶ್ ಅವರ ಮಾರ್ಗದರ್ಶನದಲ್ಲಿ ವಿ.ವಿ. ಪುರಂ ಠಾಣೆ ಇನ್ಸ್ಪೆಕ್ಟರ್ ಕೆ.ಸಿ. ಪ್ರಕಾಶ್, ಎಸ್ಐ ಬಿ.ಜಿ. ಪ್ರಕಾಶ್, ಎಎಸ್ಐ ಚಂದ್ರು ಮತ್ತು ಸಿಬ್ಬಂದಿ ಆರೋಪಿ ಬಂಧಿಸಿದ್ದಾರೆ.
ಟೆಂಪೋ ಡಿಕ್ಕಿ: ಸೈಕಲ್ ಸವಾರ ಸಾವು
ಟೆಂಪೋ ಡಿಕ್ಕಿಯಾಗಿ ಸೈಕಲ್ ಸವಾರನೊಬ್ಬ ಮೃತಪಟ್ಟಿರುವ ಘಟನೆ ಮೈಸೂರು- ಟಿ. ನರಸೀಪುರ ರಸ್ತೆಯಲ್ಲಿ ಸೋಮವಾರ ನಡೆದಿದೆ. ಮೈಸೂರು ತಾಲೂಕು ಕೀಳನಪುರ ನಿವಾಸಿ ಲೇ. ಚಿನ್ನಸ್ವಾಮಿ ಎಂಬವರ ಪುತ್ರ ಚಂದ್ರ (38) ಮೃತಪಟ್ಟವರು. ಇವರು ಗಣಪತಿ ಹಬ್ಬಕ್ಕಾಗಿ ಮಾವಿನ ಎಲೆ ತೆಗೆದುಕೊಂಡು ಸೈಕಲ್ನಲ್ಲಿ ಮನೆಗೆ ಹೋಗುತ್ತಿದ್ದ ವೇಳೆ ಟೆಂಪೋ ಡಿಕ್ಕಿಯಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಸಂಬಂಧ ಮೈಸೂರು ದಕ್ಷಿಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಕಲಿ ಕೀ ಬಳಸಿ ಕಳವು
ನಕಲಿ ಕೀ ಬಳಸಿ ಮನೆಯಲ್ಲಿದ್ದ 2.80 ಲಕ್ಷ ಮೌಲ್ಯದ ಚಿನ್ನಾಭರಣ ಕಳವು ಮಾಡಿರುವ ಘಟನೆ ಸೋಮವಾರ ಸಂಜೆ ನಡೆದಿದೆ. ವಿದ್ಯಾರಣ್ಯಪುರಂ ಸಾರ್ವಜನಿಕ ಹಾಸ್ಟೆಲ್ ರಸ್ತೆ ಅಂದಾನಿ ವೃತ್ತದ ಬಳಿಯ ನಿವಾಸಿ ಮಹದೇವ ಎಂಬವರ ಪತ್ನಿ ಎಂ.ಇಂದ್ರಾಣಿ (44) ಅವರು ಅಕ್ಕನ ಮನೆಗೆ ಹೋಗಿ ವಾಪಸ್ ಬರುವಷ್ಟರಲ್ಲಿ ಮನೆಯಲ್ಲಿ ಕಳವಾಗಿತ್ತು. ನಕಲಿ ಕೀ ಬಳಸಿ ಕಳವು ಮಾಡಿರುವುದರಿಂದ ಪರಿಚತರೆ ಈ ಕೃತ್ಯ ಎಸಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಈ ಸಂಬಂಧ ವಿದ್ಯಾರಣ್ಯಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರೈಲಿಗೆ ಸಿಕ್ಕಿ ಸಾವು
ಅಪರಿಚಿತ ವ್ಯಕ್ತಿಯೊಬ್ಬ ರೈಲಿಗೆ ಸಿಕ್ಕಿ ಮೃತಪಟ್ಟಿರುವ ಘಟನೆ ಮೈಸೂರು ರೈಲು ನಿಲ್ದಾಣದ ಪಿಡಬ್ಲ್ಯೂಐ ಕಚೇರಿ ಹತ್ತಿರ ಶನಿವಾರ ನಡೆದಿದೆ. ಚಹರೆ- 40 ವರ್ಷ, 5.6 ಅಡಿ ಎತ್ತರ, ಗೋದಿ ಮೈಬಣ್ಣ, ದೃಢಕಾಯ ಶರೀರ, ದುಂಡು ಮುಖ, ತಲೆಯಲ್ಲಿ 2 ಇಂಚು ಉದ್ದದ ಕಪ್ಪು ಕೂದಲು, ಸಣ್ಣ ಮೀಸೆ ಇದೆ. ಬಲಗೈನಲ್ಲಿ ಮಲ್ಲ ಎಂಬ ಹಚ್ಚೆ ಗುರುತು ಇದೆ. ಸಿಮೆಂಟ್ ಬಣ್ಣದ ಪ್ಯಾಂಟ್, ಕಪ್ಪು ಹಸಿರು ಬಿಳಿ ಉದ್ದ ಗೆರೆಯುಳ್ಳ ತುಂಬು ತೋಳಿನ ಪಾಲಿಸ್ಟಾರ್ ಶರ್ಟ್, ಬಲಗೈಯಲ್ಲಿ ಕೆಂಪು- ಕಪ್ಪುದಾರ ಹಾಗೂ ಕತ್ತಿನಲ್ಲಿ ಕಪ್ಪು ದಾರ ಧರಿಸಿದ್ದಾರೆ. ಮೃತ ವ್ಯಕ್ತಿಯ ದೇಹವನ್ನು ಮೈಸೂರು ವೈದ್ಯಕೀಯ ಕಾಲೇಜು ಶವಾಗಾರದಲ್ಲಿ ಇರಿಸಲಾಗಿದೆ. ಮೃತರ ವಾರಸುದಾರರು ಇದ್ದಲ್ಲಿ ದೂ.0821- 2516579 ಸಂಪರ್ಕಿಸಲು ಮೈಸೂರು ರೇಲ್ವೆ ಠಾಣೆ ಪೊಲೀಸರು ಕೋರಿದ್ದಾರೆ.
ಹಾಲಿನ ಕ್ರೇಟ್ ಕಳವು
ಅಂಗಡಿ ಮುಂದೆ ಮೈಮುಲ್ನವರು ಇರಿಸುವ ಕ್ರೇಟ್ಗಳು ಕಳವು ಆಗುತ್ತಿರುವ ಬಗ್ಗೆ ಸರಸ್ವತಿಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜನತಾನಗರ ನಿವಾಸಿ ಕುಮಾರ್ ಎಂಬವರು ಅಂಗಡಿ ಇರಿಸಿದ್ದು, ಬೆಳಗಿನ ಜಾವ ಮೈಮುಲ್ನವರು ಇರಿಸುತ್ತಿದ್ದರು. ಆದರೆ ಪ್ರತಿ ದಿನ 1-2 ಕ್ರೇಟ್ಗಳು ಕಡಿಮೆ ಆಗಿರುತ್ತಿತ್ತು. ಇದರಿಂದ ಅನುಮಾನಗೊಂಡ ಕುಮಾರ್ ಅಂಗಡಿ ಮುಂದೆ ಸಿಸಿ ಕ್ಯಾಮರಾ ಅಳವಡಿಸಿದ್ದಾರೆ. ಬೆಳಗಿನ ಜಾವ ಹಾಲಿನ ಕ್ರೇಟ್ ಇರಿಸಿ ಹೋಗುತ್ತಿದ್ದಂತೆ ವಾಹನವನ್ನು ಹಿಂಬಾಲಿಸಿ ಆಟೋದಲ್ಲಿ ಬರುತ್ತಿದ್ದ ಮೂವರು ಹಾಲಿನ ಕ್ರೇಟ್ಗಳನ್ನು ಕಳವು ಮಾಡಿರುವುದು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಈವರೆಗೆ 7 ಕ್ರೇಟ್ಗಳು ಕಳವಾಗಿದ್ದು, ಈ ಸಂಬಂಧ ಕುಮಾರ್ ಸರಸ್ವತಿಪುರಂ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.