16ರಿಂದ ಪೈಕಾ ಗ್ರಾಮೀಣ ಕ್ರೀಡಾಕೂಟ
ಕ.ಪ್ರ.ವಾರ್ತೆ ಎಚ್.ಡಿ.ಕೋಟೆ ಸೆ. 11
ಎಚ್.ಡಿ. ಕೋಟೆ ತಾಲೂಕಿನಲ್ಲಿ ಪೈಕಾ ಗ್ರಾಮೀಣ ಕ್ರೀಡಾಕೂಟ ಪಂದ್ಯಾವಳಿಯನ್ನು ಸೆ.16ರಂದು, ದಸರಾ ಮತ್ತು ಮಹಿಳಾ ಪೈಕಾ ಕ್ರೀಡಾಕೂಟವನ್ನು ಸೆ.17ರಂದು ತಾಲೂಕು ಕ್ರೀಡಾಂಗಣದಲ್ಲಿ ನಡೆಸಲು ಉದ್ದೇಶಿಸಲಾಗಿದೆ.
ಜಿಪಂ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಕರ್ನಾಟಕ ಕ್ರೀಡಾ ಪ್ರಾಧಿಕಾರವು ಆಯೋಜಿಸಿರುವ ಈ ಕ್ರೀಡಾಕೂಟಕ್ಕೆ ಆಸಕ್ತ ಮತ್ತು ಅರ್ಹ ಕ್ರೀಡಾಪಟುಗಳು ಕ್ರೀಡಾಕೂಟ ನಡೆಯುವ ದಿನದ ಬೆಳಗ್ಗೆ 9ರೊಳಗೆ ಹೆಸರು ನೋಂದಾಯಿಸಿಕೊಳ್ಳಬಹುದು.
ಪೈಕಾ ಗ್ರಾಮೀಣ ಕ್ರೀಡಾಕೂಟದಲ್ಲಿ ಭಾಗವಹಿಸುವವರು 1998, ಜನವರಿ 1ರಿಂದ ಈಚೆಗೆ ಜನಿಸಿರಬೇಕು. ವಯಸ್ಸು 16 ವರ್ಷ ಆದ ಬಾಲಕ, ಬಾಲಕಿಯರು ಭಾಗವಹಿಸಬಹುದು. ಹೆಸರು ನೋಂದಣಿ ವೇಳೆ 10ನೇ ತರಗತಿವರೆಗೆ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ತಮ್ಮ ಶಾಲಾ ಮುಖ್ಯಸ್ಥರಿಂದ ಹಾಗೂ 10ನೇ ತರಗತಿ ತೇರ್ಗಡೆಯಾದ ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಅಂಕಪಟ್ಟಿ ಹಾಜರುಪಡಿಸಬೇಕು. ಕ್ರೀಡಾಪಟುಗಳು ತಮ್ಮ ವಾಸಸ್ಥಳ ವಿಳಾಸ, ಶಾಲೆಯ ವಿಳಾಸ, ಹೋಬಳಿ, ಗ್ರಾಪಂ, ತಾಲೂಕು ಮತ್ತು ಜಾತಿ, ವರ್ಗ ನೋಂದಾಯಿಸಬೇಕು.
ದಸರಾ ಮತ್ತು ಮಹಿಳಾ ಪೈಕಾ ಕ್ರೀಡಾಕೂಟದಲ್ಲಿ ಭಾಗವಹಿಸಲು ರಾಜ್ಯದ ನಿವಾಸಿ ಆಗಿರಬೇಕು. ರಕ್ಷಣಾಪಡೆ, ಅರೆ ರಕ್ಷಣಾ ಪಡೆಗೆ ಸೇರಿದ ಕ್ರೀಡಾಪಟುಗಳು ಭಾಗವಹಿಸಲು ಅರ್ಹರಲ್ಲ. ಒಬ್ಬ ಕ್ರೀಡಾಪಟು ಅಥವಾ ತಂಡ ಯಾವುದೆ ತಾಲೂಕಿನಲ್ಲಿ ಒಂದು ಬಾರಿ ಭಾಗವಹಿಸಿದ ನಂತರ ಬೇರೆ ಯಾವುದೆ ತಾಲೂಕಿನಿಂದ ದಸರಾ ಹಾಗೂ ಪೈಕಾ ಮಹಿಳಾ ಕ್ರೀಡಾಕೂಟದಲ್ಲಿ ಭಾಗವಹಿಸುವಂತಿಲ್ಲ. ಅಂತಹ ಪ್ರಕರಣ ಕಂಡುಬಂದರೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು. ಹೆಚ್ಚಿನ ಮಾಹಿತಿಗೆ ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಚಾಮುಂಡಿ ವಿಹಾರ ಕ್ರೀಡಾಂಗಣ, ನಜರ್ಬಾದ್, ಮೈಸೂರು ಅವರನ್ನು ಖುದ್ದಾಗಿ ಅಥವಾ ದೂ. 0821- 2564179 ಅಥವಾ ತಾಲೂಕು ದೈಹಿಕ ಪರಿವೀಕ್ಷಕ ಮೊ. 8546994724 ಅಥವಾ ತಾಲೂಕು ದೈಹಿಕ ಸಂಘದ ಅಧ್ಯಕ್ಷ ನಾಗೇಶ್ ಮೊ. 9986890539 ಸಂಪರ್ಕಿಸಬಹುದು.