ಕಬಿನಿ ನಾಲಾ ಕಚೇರಿ ಎದುರು ರೈತರ ಪ್ರತಿಭಟನೆ
ಕ.ಪ್ರ.ವಾರ್ತೆ ನಂಜನಗೂಡು ಸೆ. 11
ನಾಲೆಯಲ್ಲಿ ನೀರು ಹರಿಯದೆ ಜಮೀನಿನಲ್ಲಿ ಪೈರುಗಳು ಒಣಗುತ್ತಿವೆ ಎಂದು ದೇವರಸನಹಳ್ಳಿ ಗ್ರಾಮದ ರೈತರು ಆರೋಪಿಸಿ, ಬುಧವಾರ ಕಬಿನಿ ನಾಲಾ ಕಚೇರಿಯ ಗೇಟ್ಗೆ ಬೀಗ ಹಾಕಿ ಪ್ರತಿಭಟಿಸಿದರು.
ನಾಲೆಯ ತೂಬಿನಲ್ಲಿ ನೀರು ಹರಿಯದೆ ಬೆಳೆ ಒಣಗುತ್ತಿದೆ ಎಂದು ದೂರಿದ ರೈತರು, ಎಇಇ ಚಂದ್ರಕುಮಾರ್ ಅವರಿಗೆ ಮುತ್ತಿಗೆ ಹಾಕಿದರು. ಕಬಿನಿ ಜಲಾಶಯದಲ್ಲಿ ನೀರು ಭರ್ತಿಯಾಗಿದ್ದರೂ ಅಧಿಕಾರಿಗಳು ನಿಗದಿತ ಸಮಯದಲ್ಲಿ ನಾಲೆಗಳಲ್ಲಿ ಹೂಳು ತೆಗೆಸದೆ ಇರುವುದರಿಂದ ಸಮರ್ಪಕವಾಗಿ ನಾಲೆಯಲ್ಲಿ ನೀರು ಹರಿಯುತ್ತಿಲ್ಲ. ಇದರಿಂದ ರೈತರು ಕಂಗಾಲಾಗಿದ್ದು, ಜಮೀನಿನಲ್ಲಿ ಹಾಕಿರುವ ಹೊಟ್ಟು ಹಾಗೂ ಪೈರುಗಳು ಒಣಗುತ್ತಿವೆ. ತಕ್ಷಣ ನಾಲೆಗೆ ನೀರು ಹರಿಸಬೇಕೆಂದು ರೈತರು ಒತ್ತಾಯಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಚಂದ್ರಕುಮಾರ್, ಎರಡು ದಿನಗಳಿಂದ ಈ ಭಾಗದಲ್ಲಿ ಮಳೆಯಾಗುತ್ತಿರುವುದರಿಂದ ನಾಲೆಯಲ್ಲಿ ನೀರು ಹರಿಸುವುದನ್ನು ಸ್ಥಗಿತಗೊಳಿಸಲಾಗಿತ್ತು. ಕಳೆದ ರಾತ್ರಿಯಿಂದಲೆ ನೀರು ಹರಿಸಲಾಗುತ್ತಿದೆ. 26ನೇ ತೂಬು ಸ್ವಲ್ಪ ಎತ್ತರವಿರುವುದರಿಂದ ಸಂಜೆಯೊಳಗೆ ಸಮರ್ಪಕವಾಗಿ ನೀರು ಹರಿಯುತ್ತದೆ ಎಂದು ರೈತರಿಗೆ ಭರವಸೆ ನೀಡಿದರು. ನಂತರ ರೈತರು ಪ್ರತಿಭಟನೆ ವಾಪಸ್ ಪಡೆದರು.